ADVERTISEMENT

ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಬೀದಿನಾಯಿಯನ್ನು ಹೊಡೆದು ಕೊಂದು ಹಾಕಿದ ಸಾರ್ವಜನಿಕರು, ಗಾಯಾಳುಗಳಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 3:16 IST
Last Updated 1 ಜನವರಿ 2026, 3:16 IST
ನಾಯಿ ಕಡಿತದಿಂದ ಗಾಯಗೊಂಡವರು ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ‌ರು
ನಾಯಿ ಕಡಿತದಿಂದ ಗಾಯಗೊಂಡವರು ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ‌ರು   

ಕೋಲಾರ: ನಗರದ ಆರ್‌ಟಿಓ ಕಚೇರಿ ಮುಂಭಾಗ ಬುಧವಾರ ಬೀದಿನಾಯಿಯು ಕೇವಲ ಒಂದೂವರೆ ತಾಸಿನಲ್ಲಿ ಆರ್‌ಟಿಒ ಬ್ರೇಕ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 21 ಜನರನ್ನು ಕಚ್ಚಿ ಗಾಯಗೊಳಿಸಿದೆ. ಕೊನೆಯಲ್ಲಿ ಸಾರ್ವಜನಿಕರೇ ಆ ನಾಯಿಯನ್ನು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ.

ಅದು ಹುಚ್ಚು ನಾಯಿಯೋ ಅಥವಾ ಸಾಮಾನ್ಯ ನಾಯಿಯೋ ಎಂಬುದು ಗೊತ್ತಾಗಿಲ್ಲ. ಬಾಯಿಯಿಂದ ಜೊಲ್ಲು ಬರುತ್ತಿದ್ದು, ಅದು ಹುಚ್ಚುನಾಯಿ ಎಂದು ಗಾಯಾಳುಗಳು ಹೇಳಿದರು.

ಬೆಳಗ್ಗೆ 11 ಗಂಟೆಗೆ ಆರ್‌ಟಿಓ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿದ್ದವರ ಮೇಲೆ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ಅದರಲ್ಲಿ ಒಂದು ನಾಯಿ ರಕ್ತ ಬರುವಂತೆಯೇ ಕಚ್ಚಿ ಗಾಯಗೊಳಿಸಿದೆ. ಅಲ್ಲಿಂದ ಓಡಿದ ನಾಯಿ ಪಕ್ಕದಲ್ಲಿರುವ ಹಳೆ ಹೆಂಚಿನ ಕಾರ್ಖಾನೆ ಬಡಾವಣೆ, ಬಿಜಿಎಸ್ ಪಿಯು ಕಾಲೇಜು ಬಳಿಗೆ ಹೋಗಿ ಅಲ್ಲಿಯೂ ನಾಲ್ಕೈದು ಮಂದಿಯನ್ನು ಕಚ್ಚಿ ಗಾಯಗೊಳಿಸಿತು.

ADVERTISEMENT

ನಾಯಿಯಿಂದ ಕಡಿತಕ್ಕೊಳಗಾದ ಗಾಯಾಳುಗಳನ್ನು ಕೂಡಲೇ ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಥಮ ಚಿಕಿತ್ಸೆ ಮಾಡಿಸಿ ಲಸಿಕೆ ನೀಡಿ ಕಳಿಸಲಾಯಿತು.

ನಾಯಿ ದಾಳಿ ಮಾಡಿ ಕಚ್ಚುತ್ತಿದ್ದಂತೆ ಸಾರ್ವಜನಿಕರೇ ನಗರಸಭೆಗೆ ಮಾಹಿತಿ ನೀಡಿದ್ದಾರೆ. ಕೋಲಾರ ನಗರಸಭೆ ಆಯುಕ್ತ ನವೀನ್‌ ಚಂದ್ರ ಅವರು ಕೆಜಿಎಫ್‌ನಿಂದ ನಾಯಿ ಹಿಡಿಯುವ ಪರಿಣತರನ್ನು ಕರೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ರಾಷ್ಟ್ರೀಯ ಹೆದ್ದಾರಿ –75 ರತ್ತ ತೆರಳುತ್ತಿದ್ದ ಆ ನಾಯಿಯನ್ನು ಸಾರ್ವಜನಿಕರೇ ಹಿಡಿದು ಕೊಂದು ಹಾಕಿದರು. ಚರಂಡಿಗೆ ತಳ್ಳಿ ಕೋಲಿನಿಂದ ಹೊಡೆದರು.

ನವೀನ್‌ ಚಂದ್ರ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್ ಎಸ್‌ಎನ್‌ಆರ್‌ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ಗಾಯಾಳುಗಳೊಂದಿಗೆ ಮಾತನಾಡಿ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಿದರು.

ಆರ್‌ಟಿಒ ಕಚೇರಿಯ ಆವರಣದಲ್ಲಿ ವಿವಿಧ ಕೆಲಸಕ್ಕೆಂದು ಬಂದವರು ಬೀದಿನಾಯಿ ದಾಳಿಗೆ ಬೆದರಿ ಕಂಗಾಲಾಗಿ ಓಡುತ್ತಿದ್ದ ದೃಶ್ಯ ಕಂಡುಬಂತು. ಕೆಲ ದೃಶ್ಯಗಳು ಕಚೇರಿಯ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈಚೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕು, ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.‌

ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ನವೀನ್‌ ಚಂದ್ರ, ‘ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬೀದಿನಾಯಿಗಳು ಮತ್ತು ಸಾಂಸ್ಥಿಕ (ಶಾಲಾ ಕಾಲೇಜು, ಆಸ್ಪತ್ರೆ ಆವರಣ) ನಾಯಿಗಳೆಂದು ವಿಂಗಡಿಸಲಾಗಿದೆ. ಹೆಣ್ಣು ಹಾಗೂ ಗಂಡು ಬೇರ್ಪಡಿಸಿ ಕ್ವಾರಂಟೈನ್‌ ಮಾಡಿ, ಆ್ಯಂಟಿ ರೇಬಿಸ್‌ ಲಸಿಕೆ (ಎಆರ್‌ವಿ) ಹಾಕಲಾಗುವುದು. ಹೆಣ್ಣು ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು’ ಎಂದರು.

ಬೀದಿನಾಯಿಗಳನ್ನು ಸುರಕ್ಷಿತವಾಗಿ ಅದೇ ಜಾಗಕ್ಕೆ ಬಿಡಲಾಗುವುದು. ಅವುಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿ ಒಂದು ವಾರ್ಡಿನಲ್ಲಿ 2 ರಿಂದ 3 ಜಾಗಗಳಲ್ಲಿ ಗುರುತಿಸಿ ಆಹಾರ ನೀಡುವ ಕೇಂದ್ರ ಸ್ಥಾಪಿಸಲಾಗುವುದು. ಸಾರ್ವಜನಿಕರು ಅದೇ ಜಾಗಗಳಲ್ಲಿ ಆಹಾರ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಶಾಲಾ ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿ ಆವರಣಗಳಲ್ಲಿ ವಾಸಿಸುವ ನಾಯಿಗಳನ್ನು ಶೆಲ್ಟರ್‌ನಲ್ಲಿ ಇರಿಸಿ ಆಹಾರ ನೀಡಲಾಗುವುದು. ಇವುಗಳಿಗೂ ಎಆರ್‌ವಿ ಲಸಿಕೆ ಮತ್ತು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು.

ಕೋಲಾರ ಬಳಿ ರಾಷ್ಟ್ರೀಯ ಹೆದ್ದಾರಿಯತ್ತ ಓಡಿದ ನಾಯಿ
21 ಜನರನ್ನು ಕಚ್ಚಿದ ನಾಯಿಯನ್ನು ಹೊಡೆದು ಕೊಂಚ ಸಾರ್ವಜನಿಕರು

ಜಿಲ್ಲೆಯಲ್ಲಿ 79281 ಬೀದಿನಾಯಿಗಳು!

ಸಮೀಕ್ಷೆ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಅಂದಾಜು 79281 ಬೀದಿನಾಯಿಗಳು ಇವೆ. ಕಳೆದ ಒಂದು ವರ್ಷದಲ್ಲಿ ಸಾವಿರಕ್ಕೂ ಅಧಿಕ ಜನರನ್ನು ಕಚ್ಚಿ ಗಾಯಗೊಳಿಸಿವೆ. ಹೀಗಾಗಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್‌ ಸೂಚನೆಯಂತೆ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ (ಅನಿಮಲ್‌ ಬರ್ತ್‌ ಕಂಟ್ರೋಲ್‌) ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೇ ಶಾಲಾ ಕಾಲೇಜು ಆಸ್ಪತ್ರೆ ನಿಲ್ದಾಣಗಳ ಆವರಣದಲ್ಲಿರುವ ಬೀದಿನಾಯಿಗಳನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ (ಶೆಲ್ಟರ್‌) ಸ್ಥಳಾಂತರಿಸಲು ನಿರ್ಧರಿಸಿದೆ. ಜಿಲ್ಲೆಯ ನಗರ ಹಾಗೂ ಪಟ್ಟಣ ವ್ಯಾಪ್ತಿಯ ಖಾಸಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಆಸ್ಪತ್ರೆಗಳು ಬಸ್‌ ರೈಲು ನಿಲ್ದಾಣ ಆವರಣಗಳಲ್ಲಿ ಸುಮಾರು 1065 ಬೀದಿನಾಯಿಗಳಿವೆ. ಅದೇ ರೀತಿ ಗ್ರಾಮಾಂತರ ಪ್ರದೇಶದ ಶಾಲಾ ಕಾಲೇಜು ಆಸ್ಪತ್ರೆ ಆವರಣದಲ್ಲಿ 9429 ಬೀದಿನಾಯಿಗಳಿವೆ. ಮಾರ್ಗಸೂಚಿಗಳಂತೆ 100 ನಾಯಿಗಳ ಆಶ್ರಯ ಕೇಂದ್ರಕ್ಕೆ ತಿಂಗಳಿಗೆ ಅಂದಾಜು ₹ 3.33 ಲಕ್ಷ ವೆಚ್ಚವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.