ADVERTISEMENT

ಕೋಲಾರ: ಮುಂದುವರಿದ ಸೋಂಕಿತರ ಸಾವಿನ ಸರಣಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 14:14 IST
Last Updated 9 ಜುಲೈ 2021, 14:14 IST

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಶುಕ್ರವಾರ ಇಬ್ಬರು ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಕೋಲಾರ ಹಾಗೂ ಮುಳಬಾಗಿಲು ತಾಲ್ಲೂಕಿನ ತಲಾ ಒಬ್ಬರು ಮೃತಪಟ್ಟಿದ್ದು, ಸೋಂಕಿತರ ಸಾವಿನ ಸಂಖ್ಯೆ 518ಕ್ಕೆ ಏರಿಕೆಯಾಗಿದೆ. ಸೋಂಕಿತರ ಸರಣಿ ಸಾವಿನ ಬೆನ್ನಲ್ಲೇ ಹೊಸದಾಗಿ 67 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 872ಕ್ಕೆ ಇಳಿದಿದೆ.

ಕೋಲಾರ ತಾಲ್ಲೂಕಿನ 27 ಮಂದಿಗೆ, ಮಾಲೂರು ತಾಲ್ಲೂಕಿನ ಇಬ್ಬರಿಗೆ, ಬಂಗಾರಪೇಟೆ ಮತ್ತು ಕೆಜಿಎಫ್‌ ತಾಲ್ಲೂಕಿನ ತಲಾ 7 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 5 ಮಂದಿಗೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 19 ಮಂದಿಗೆ ಸೋಂಕು ಬಂದಿದೆ.

ADVERTISEMENT

ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 67 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು.

ಕೋಲಾರ ತಾಲ್ಲೂಕಿನ 14 ಮಂದಿ, ಮಾಲೂರು ತಾಲ್ಲೂಕಿನ 12, ಬಂಗಾರಪೇಟೆ ತಾಲ್ಲೂಕಿನ 7, ಕೆಜಿಎಫ್‌ ತಾಲ್ಲೂಕಿನ 5, ಮುಳಬಾಗಿಲು ತಾಲ್ಲೂಕಿನ 16 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 13 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.