ADVERTISEMENT

ತಹಶೀಲ್ದಾರ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 15:06 IST
Last Updated 10 ಜುಲೈ 2020, 15:06 IST
ತಹಶೀಲ್ದಾರ್‌ ಚಂದ್ರಮೌಳೇಶ್ವರ ಅವರ ಸ್ಮರಣಾರ್ಥ ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ತಹಶೀಲ್ದಾರ್‌ ಚಂದ್ರಮೌಳೇಶ್ವರ ಅವರ ಸ್ಮರಣಾರ್ಥ ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.   

ಕೋಲಾರ: ನಗರದ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶುಕ್ರವಾರ ತಹಶೀಲ್ದಾರ್‌ ಚಂದ್ರಮೌಳೇಶ್ವರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಚಂದ್ರಮೌಳೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ‘ಜನಪರ ಅಧಿಕಾರಿಯಾಗಿದ್ದ ಚಂದ್ರಮೌಳೇಶ್ವರ ಅವರು ಕೋವಿಡ್–-19 ವಿರುದ್ಧ ಯೋಧರಂತೆ ರೀತಿ ಕೆಲಸ ಮಾಡುತ್ತಿದ್ದರು. ಸರ್ಕಾರದ ಜಮೀನು ಉಳಿಸುವ ನಿಟ್ಟಿನಲ್ಲಿ ಅವರಿಗೆ ಸಾಕಷ್ಟು ಬದ್ಧತೆಯಿತ್ತು. ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುತ್ತಿದ್ದರು’ ಎಂದು ಸ್ಮರಿಸಿದರು.

‘ಪ್ರಾಮಾಣಿಕ ಅಧಿಕಾರಿ ಕಳೆದುಕೊಂಡಿರುವ ನಾವು ನತದೃಷ್ಟರು. ಚಂದ್ರಮೌಳೇಶ್ವರ ಅವರಂತಹ ದಕ್ಷ ಅಧಿಕಾರಿಗಳು ಮತ್ತೆ ಹುಟ್ಟಿ ಬರಬೇಕು. ಅಧಿಕಾರಿಗಳು ಧೃತಿಗೆಡದೆ ಜನಪರವಾಗಿ ಕೆಲಸ ಮಾಡಬೇಕು. ನಾವು ಸದಾ ಅಧಿಕಾರಿಗಳ ರಕ್ಷಣೆಗೆ ಬದ್ಧವಾಗಿರುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್.ಅರುಣ್‌ಪ್ರಸಾದ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್, ಉಪ ಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

ಮೌನಾಚರಣೆ: ಡಿಡಿಪಿಐ ಕಚೇರಿ ಸಿಬ್ಬಂದಿಯು ಮೌನಾಚರಣೆ ಮಾಡಿ ಚಂದ್ರಮೌಳೇಶ್ವರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

‘ಜನರು ಕಾನೂನಾತ್ಮಕವಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಅಮಾನವೀಯ ವರ್ತನೆಗೆ ಮುಂದಾಗಬಾರದು. ಸರ್ಕಾರಿ ನೌಕರರು, ಅಧಿಕಾರಿಗಳಿಗೂ ಕುಟುಂಬ ಇರುತ್ತದೆ. ಕೊಲೆಯಂತಹ ನೀಚ ಕೃತ್ಯಕ್ಕೆ ಇಳಿಯುವುದು ರಾಕ್ಷಸಿ ವರ್ತನೆ’ ಎಂದು ಡಿಡಿಪಿಐ ಕೆ.ರತ್ನಯ್ಯ ಖಂಡಿಸಿದರು.

ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ದೈಹಿಕ ಶಿಕ್ಷಣ ಸೂಪರಿಂಟೆಂಡೆಂಟ್‌ ಮಂಜುನಾಥ್, ಇಸಿಒ ಶ್ರೀನಿವಾಸನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.