ಕೋಲಾರ: ‘ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ನಮ್ಮ ಪಕ್ಷದ ನಾಲ್ವರು ಅಭ್ಯರ್ಥಿಗಳು ಭ್ರಷ್ಟಾಚಾರ ಮಾಡುವುದಿಲ್ಲವೆಂದು ಪ್ರಮಾಣ ಮಾಡಿದ್ದಾರೆ. ಹಾಗೆಯೇ ಜೆಸಿಬಿ ಪಕ್ಷಗಳ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಅಭ್ಯರ್ಥಿಗಳು ಪ್ರಮಾಣ ಮಾಡಲಿ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಸವಾಲು ಹಾಕಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗೆದ್ದರೆ ನಮ್ಮ ಪಕ್ಷದ ಅಭ್ಯರ್ಥಿಗಳು ಮಾದರಿ ಆಡಳಿತ ನೀಡಲಿದ್ದಾರೆ. ಆಕಸ್ಮಾತ್ ಭ್ರಷ್ಟಾಚಾರ ನಡೆಸಿದರೆ ತಕ್ಷಣ ರಾಜೀನಾಮೆ ಪಡೆಯುತ್ತೇವೆ. ಆ ರೀತಿ ನಾವು ಪ್ರಮಾಣ ಮಾಡಿಸಿಕೊಂಡಿದ್ದೇವೆ. ಪ್ರಮಾಣಪತ್ರವನ್ನೂ ನೀಡಿದ್ದೇವೆ’ ಎಂದರು.
‘17 ವಾರ್ಡ್‍ಗಳ ಪೈಕಿ 4 ವಾರ್ಡ್‍ಗಳಲ್ಲಿ ಸಾಮಾನ್ಯ ಜನರನ್ನೇ ಅಭ್ಯಥಿಗಳನ್ನಾಗಿ ಆಯ್ಕೆ ಮಾಡಿದ್ದೇವೆ. ಮತದಾರರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ನಾಲ್ವರೂ ಗೆಲ್ಲುವ ವಿಶ್ವಾಸವಿದೆ. ಹಲವು ವಾರ್ಡ್‌ಗಳು ಮೂಲ ಸೌಲಭ್ಯ ಕೊರತೆ ಎದುರಿಸುತ್ತಿವೆ. ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಈ ವಾರ್ಡ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಮಾದರಿಯನ್ನಾಗಿ ಮಾಡಿ ತೋರಿಸುತ್ತೇವೆ’ ಎಂದು ಹೇಳಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ‘ಪ್ರತಿ ಮನೆಗೂ ಪ್ರಮಾಣಪತ್ರ ತಲುಪಿಸಿದ್ದೇವೆ. ಗೆಲ್ಲಿಸಿದ್ದೇ ಆದಲ್ಲಿ ಅನುದಾನದ ಮಾಹಿತಿಯ ಫಲಕವನ್ನು ವಾರ್ಡ್‍ನಲ್ಲಿ ಅಳವಡಿಸಿ, ಪಾರದರ್ಶಕವಾಗಿ ಆಡಳಿತ ನಡೆಸಿ ಇಡೀ ಜಿಲ್ಲೆಯಲ್ಲೇ ಮಾದರಿ ವಾರ್ಡ್ ರೂಪಿಸಲಾಗುವುದು. ಒಂದು ವೇಳೆ ನಮ್ಮವರು ಭ್ರಷ್ಟಾಚಾರ ಮಾಡಿದರೂ ಇದೇ ಪೊರಕೆಯಿಂದ ಗುಡಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಪಿ.ನಾಗರಾಜ್ ಮಾತನಾಡಿ, ‘ನೆಲೆಯೇ ಇಲ್ಲದ ಪರಿಸ್ಥಿತಿಯಲ್ಲಿ ನಾಲ್ವರು ಅಭ್ಯರ್ಥಿಗಳು ಸಿಕ್ಕಿದ್ದಾರೆ. ಮೊದಲ ಪ್ರಯತ್ನ ಮಾಡುತ್ತಿದ್ದೇವೆ. ಸಾಮಾನ್ಯ ಜನರಿಗೇ ಅವಕಾಶ ನೀಡಲಾಗಿದೆಯೇ ಹೊರತು ಸೂಟ್‌ಕೇಸ್ ಪಡೆದು ಟಿಕೆಟ್ ನೀಡುವ ಸಂಸ್ಕೃತಿ ನಮ್ಮಲ್ಲಿಲ್ಲ. ಊರಿನ ಅಭಿವೃದ್ಧಿ ದೆಸೆಯಿಂದ ಇಂತಹ ಅಭ್ಯರ್ಥಿಗಳಿಗೆ ಮತ ನೀಡಿ ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು.
ವೇಮಗಲ್ ಮುಖಂಡ ವಿಜಯ್ ಕುಮಾರ್ ಮಾತನಾಡಿ, ‘ಮನೆಮನೆಗೆ ಹೋಗಿ ಪ್ರಚಾರ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. 17 ವಾರ್ಡ್‍ಗಳಲ್ಲಿ ಕಾಂಗ್ರೆಸ್, ಬಿಜೆಪಿ–ಜೆಡಿಎಸ್ ಮೈತ್ರಿ ಪಕ್ಷದವರು ಮತ ಕೇಳಲು ಹಣದ ಜತೆಗೆ ಹೊರಟಿದ್ದಾರೆ. ಆದರೂ ನಮಗೆ ಮತ ನೀಡಿದರೆ ಸ್ವಚ್ಛ ಆಡಳಿತ ನೀಡುವುದಾಗಿ ಮನವಿ ಮಾಡುತ್ತಿದ್ದೇವೆ’ ಎಂದರು.
ಅಭ್ಯರ್ಥಿಗಳಾದ ಗೌರಿಶಂಕರ್, ಪಿ.ಲಲಿತಮ್ಮ, ಲಕ್ಷ್ಮಮ್ಮ ಮಾತನಾಡಿ, ‘ನಾವು ಯಾವುದೇ ಭ್ರಷ್ಟಾಚಾರ ಮಾಡಲ್ಲವೆಂದು ಈಗಾಗಲೇ ಪ್ರಮಾಣ ಮಾಡಿದ್ದೇವೆ. ನಮ್ಮಿಂದ ಭ್ರಷ್ಟಾಚಾರ ಆದರೆ ಅಂದೇ ರಾಜೀನಾಮೆ ನೀಡುತ್ತೇವೆ. ಭ್ರಷ್ಟಾಚಾರ ಮಾಡುವುದಿಲ್ಲ, ಮಾಡಲು ಬಿಡುವುದೂ ಇಲ್ಲ. ಅನುದಾನ ದುರ್ಬಳಕೆಯಾಗಲು ಬಿಡುವುದಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಬಿಜೆಪಿ-ಜೆಡಿಎಸ್‍ನವರು ಶೇ 60 ಶೇ 40 ಕಮಿಷನ್ ಹಣದ ಹೊಳೆಯನ್ನು ಚುನಾವಣೆಯಲ್ಲಿ ಹರಿಸುತ್ತಿದ್ದಾರೆ. ಒಂದು ದಿನದ ಆಸೆ ಆಮಿಷಕ್ಕೆ ಮತದಾರರು ಒಳಗಾಗಬಾರದುಸುರೇಶ್ ಎಎಪಿ ರಾಜ್ಯ ಕಾರ್ಯದರ್ಶಿ
ವೇಮಗಲ್–ಕುರುಗಲ್ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಮ್ಮ ಪಕ್ಷದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕುಕೆ.ಪಿ.ವೆಂಕಟಾಚಲಪತಿ ಎಎಪಿ ಜಿಲ್ಲಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.