ADVERTISEMENT

ಪಿಡಿಒಗೆ ನಿಂದನೆ: ಸಂಸದರ ಕ್ಷಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 13:36 IST
Last Updated 8 ಡಿಸೆಂಬರ್ 2021, 13:36 IST

ಕೋಲಾರ: ‘ಕೆಜಿಎಫ್‌ ತಾಲ್ಲೂಕಿನ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸರೆಡ್ಡಿ ಅವರನ್ನು ಅವಾಚ್ಯವಾಗಿ ನಿಂದಿಸಿರುವ ಸಂಸದ ಮುನಿಸ್ವಾಮಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ಜಿಲ್ಲಾ ರೆಡ್ಡಿ ಜನ ಸಂಘದ ನಿರ್ದೇಶಕ ಅಶೋಕಾನಂದ ರೆಡ್ಡಿ ಆಗ್ರಹಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಸದರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಇಲ್ಲವಾದರೆ ಮುಂದೆ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸರ್ಕಾರಿ ಅಧಿಕಾರಿಗಳು ಸಂಸದರ ಮನೆಯ ಆಳುಗಳಲ್ಲ’ ಎಂದು ಗುಡುಗಿದರು.

‘ಬಿಜೆಪಿ ವತಿಯಿಂದ ಕೆಜಿಎಫ್‌ ತಾಲ್ಲೂಕಿನ ಕೋಟಿಲಿಂಗ ದೇವಾಲಯದ ಆವರಣದಲ್ಲಿ ನ.5ರಂದು ಕೇದಾರನಾಥದಲ್ಲಿನ ಕಾರ್ಯಕ್ರಮದ ನೇರ ಪ್ರಸಾರ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಪಿಡಿಒ ಶ್ರೀನಿವಾಸರೆಡ್ಡಿ ಅವರು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಸಂಸದರು ಮನಬಂದಂತೆ ಮಾತನಾಡಿರುವುದು ಸರಿಯಲ್ಲ. ಸಂಸದ ಸ್ಥಾನದ ಘನತೆ ಮರೆತು ಅಧಿಕಾರಿಯನ್ನು ನಿಂದಿಸಿರುವುದು ಅವರಿಗೆ ಶೋಭೆಯಲ್ಲ’ ಎಂದರು.

ADVERTISEMENT

‘ಜನಪ್ರತಿನಿಧಿಗಳು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡಿಸಬೇಕು. ಅದು ಬಿಟ್ಟು ಅಸಂವಿಧಾನಿಕ ಪದ ಬಳಸಿ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಸಂಸದರು ಪಿಡಿಒರನ್ನು ನಿಂದಿಸಿರುವ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಸದರ ವರ್ತನೆಯಿಂದ ಶ್ರೀನಿವಾಸರೆಡ್ಡಿ ಅವರ ಕುಟುಂಬ ಸದಸ್ಯರಿಗೆ ಮಾನಸಿಕವಾಗಿ ತೀವ್ರ ನೋವಾಗಿದೆ’ ಎಂದು ಹೇಳಿದರು.

‘ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಪಿಡಿಒ ಶ್ರೀನಿವಾಸರೆಡ್ಡಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಅವರ ಅಮಾನತು ಆದೇಶ ಹಿಂಪಡೆಯಲಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳ ಜತೆ ಸೌಜನ್ಯದಿಂದ ವರ್ತಿಸಬೇಕು. ಅಧಿಕಾರಿಗಳು ತಪ್ಪು ಮಾಡಿ ಗೌರವಯುತ ಮಾತುಗಳಲ್ಲಿ ಬುದ್ಧಿ ಹೇಳಲಿ’ ಎಂದು ಸಲಹೆ ನೀಡಿದರು.

ಜಿಲ್ಲಾ ರೆಡ್ಡಿ ಜನ ಸಂಘದ ಸದಸ್ಯರಾದ ನವೀನ್‌ರೆಡ್ಡಿ, ವೇಣುಗೋಪಾಲ್‌ರೆಡ್ಡಿ. ಚನ್ನರಾಯರೆಡ್ಡಿ, ಕೇಶವರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.