ADVERTISEMENT

ಕಡತ ವಿಲೇವಾರಿ ಚುರುಕುಗೊಳಿಸಿ: ರೇವಣ ಸಿದ್ದಪ್ಪ

ಅಧಿಕಾರಿಗಳಿಗೆ ಡಿಡಿಪಿಐ ರೇವಣ ಸಿದ್ದಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 10:30 IST
Last Updated 19 ನವೆಂಬರ್ 2021, 10:30 IST
ಡಿಡಿಪಿಐ ರೇವಣ ಸಿದ್ದಪ್ಪ ಕೋಲಾರದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಡಿಡಿಪಿಐ ರೇವಣ ಸಿದ್ದಪ್ಪ ಕೋಲಾರದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಕೋಲಾರ: ‘ಗುರುಸ್ಪಂದನಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ. ಜತೆಗೆ ಕಡತ ವಿಲೇವಾರಿ ಚುರುಕುಗೊಳಿಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣ ಸಿದ್ದಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕಡತ ವಿಲೇವಾರಿ ಚುರುಕುಗೊಳಿಸಿ ಬಾಕಿಯಿರುವ ಪ್ರಕರಣಗಳ ವಿವರ ಪಟ್ಟಿ ಮಾಡಬೇಕು. ಇಲಾಖಾ ಶಿಸ್ತು ಪ್ರಕರಣಗಳಲ್ಲಿ ಬಹಳ ಜಾಗರೂಕರಾಗಿರಿ. ಈ ಸಂಬಂಧ ನಿಯಮಗಳಡಿ ಕೆಲಸ ಮಾಡಬೇಕಿದ್ದು,ಅಗತ್ಯ ಜ್ಞಾನ ಪಡೆದುಕೊಳ್ಳಿ. ಇದಕ್ಕೆ ತರಬೇತಿ ಅಗತ್ಯವಿದ್ದರೆ ತಿಳಿಸಿ ವ್ಯವಸ್ಥೆ ಮಾಡುತ್ತೇವೆ’ ಎಂದರು.

‘ಶೈಕ್ಷಣಿಕ ಅಭಿವೃದ್ಧಿಗೆ ಮೇಲುಸ್ತುವಾರಿ ಪರಿಣಾಮಕಾರಿಯಾಗಿ ಆಗಬೇಕು. ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಶಿಕ್ಷಣ ಸಂಯೋಜಕರು, ಬಿಆರ್‌ಪಿಗಳು ಸೇರಿದಂತೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ವಾರದಲ್ಲಿ 2 ದಿನ ಶಾಲೆಗಳ ಪ್ರಾರ್ಥನಾ ವೇಳೆಯಲ್ಲಿ ಹಾಜರಿದ್ದು, ಫೋಟೋ ತೆಗೆದು ಇಲಾಖೆ ಅಧಿಕಾರಿಗಳ ಗ್ರೂಪ್‍ಗೆ ಅಪ್‍ಲೋಡ್ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

‘ಶಾಲೆಗಳಿಗೆ ಭೇಟಿ ನೀಡಿದಾಗ ತರಗತಿಗಳಲ್ಲಿ 15ರಿಂದ 20 ನಿಮಿಷ ಮಕ್ಕಳೊಂದಿಗೆ ಕಳೆಯಿರಿ. ಓದು ಮತ್ತು ಬರವಣಿಗೆ ಕೌಶಲ ಪರಿಶೀಲಿಸಿ. ಗಣಿತದ ಮೂಲಭೂತ ಪರಿಕಲ್ಪನೆಗಳನ್ನು ಪರೀಕ್ಷಿಸಿ. ಕ್ಷೇತ್ರ ಸಮನ್ವಯಾಧಿಕಾರಿಗಳು ಪ್ರಾಥಮಿಕ ಶಿಕ್ಷಣದಲ್ಲಿ ‘ಸ್ವಚ್ಚ ಓದು ಶುದ್ಧ ಬರಹ’ ಎಲ್ಲಾ ತರಗತಿಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆಯೇ ಎಂಬುದನ್ನು ಪರಿಶೀಲಿಸಿ, ಕ್ರಿಯಾಯೋಜನೆ ರೂಪಿಸಿ ಕ್ರಮ ವಹಿಸಿ’ ಎಂದು ತಿಳಿಸಿದರು.

ಕಿಚನ್‌ ಗಾರ್ಡನ್: ‘ಶಾಲೆಗಳಲ್ಲಿ ಕಿಚನ್ ಗಾರ್ಡನ್‌ ನಿರ್ಮಾಣ, ಪರಿಸರ ರಕ್ಷಣೆಗೆ ಗಿಡ ಮರ ಬೆಳೆಸಲು ಅನುಷ್ಠಾನಾಧಿಕಾರಿಗಳು ಒತ್ತು ಕೊಡಿ. ಇದನ್ನು ಆಂದೋಲನದ ಮಾದರಿಯಲ್ಲಿ ನಡೆಸಿ. ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ ವಹಿಸಿ. ಕಾಲಕಾಲಕ್ಕೆ ಗಮನ ಹರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ’ ಎಂದು ಹೇಳಿದರು.

‘ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆ, ಕುಡಿಯುವ ನೀರಿನ ಲಭ್ಯತೆ ಪರಿಶೀಲಿಸಿ. ಶೌಚಾಲಯವಿಲ್ಲದ ಶಾಲೆಗಳಲ್ಲಿ ಕೂಡಲೇ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯಿರುವ ಶಾಲೆಗಳ ಪಟ್ಟಿ ಸಿದ್ಧಪಡಿಸಿ’ ಎಂದು ಆದೇಶಿಸಿದರು.

ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಡಿವೈಪಿಸಿ ಗಂಗರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟರಾಮರೆಡ್ಡಿ, ಕೆಂಪಯ್ಯ, ಚಂದ್ರಶೇಖರ್, ಉಮಾದೇವಿ, ಗಿರಿಜೇಶ್ವರಿ, ಕೃಷ್ಣಮೂರ್ತಿ, ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.