ADVERTISEMENT

ತಾಲೂಕು ಪಂಚಾಯಿತಿ ಕಟ್ಟಡಕ್ಕೆ ಕಡಿಮೆ ಬಾಡಿಗೆ ನಿಗದಿ: ಆರೋಪ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 3:13 IST
Last Updated 8 ಏಪ್ರಿಲ್ 2022, 3:13 IST

ಮುಳಬಾಗಿಲು: ‘ನಗರದ ಹಳೇ ಕೋರ್ಟ್‌ ಆವರಣದಲ್ಲಿರುವ ತಾ.ಪಂ. ಕಚೇರಿಗೆ ಸೇರಿದ ಕಟ್ಟಡವನ್ನು ₹ 15 ಸಾವಿರಕ್ಕೆ ಬಾಡಿಗೆ ನೀಡಲಾಗಿದೆ. ಕಡಿಮೆ ದರಕ್ಕೆ ಬಾಡಿಗೆ ನೀಡಿದ್ದು ಕೂಡಲೇ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಪಕ್ಷದಿಂದ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ಜೆಡಿಎಸ್ ಕೋರ್‌ ಕಮಿಟಿ ಸದಸ್ಯ ಸಮೃದ್ಧಿ ಮಂಜುನಾಥ್ ಎಚ್ಚರಿಸಿದರು.

ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಮಾರಿಯಮ್ಮ ಉಟ್ಲು ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಟ್ಟಡವನ್ನು ಬಾಡಿಗೆ ನೀಡಬೇಕಾದರೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆದಿರಬೇಕು. ಅಧಿಕಾರಿಗಳು ಯಾರದೋ ಮಾತು ಕೇಳಿ ಕಡಿಮೆ ಬಾಡಿಗೆ ಹಾಗೂ ಮುಂಗಡ ಹಣ ಪಡೆದು ಬಾಡಿಗೆ ನೀಡಿರುವುದು ಸರಿಯಲ್ಲ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಸಾಗುವಳಿ ಚೀಟಿ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ. ತಾಲ್ಲೂಕು ದರಖಾಸ್ತು ಸಮಿತಿ ಸದಸ್ಯರು ಸಾಗುವಳಿ ಚೀಟಿಗಳನ್ನು ಮನೆಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಸೂಕ್ತ ಅಭ್ಯರ್ಥಿಗಳನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಕಣಕ್ಕೆ ಇಳಿಸಲು ಈಗಾಗಲೇ ಪಟ್ಟಿ ತಯಾರಿಸಲಾಗಿದೆ ಎಂದು
ತಿಳಿಸಿದರು.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಉತ್ತಮವಾಗಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು, ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಟಿ.ಎಚ್. ತೇಜಾರಮಣ, ನಗರಸಭೆ ಸದಸ್ಯ ಮುನಿರಾಜು, ಮುಖಂಡರಾದ ಆವಣಿ ಬಾಬು, ರಘು, ಕಾವೇರಿ ಸುರೇಶ್, ಮಂಜುನಾಥ್, ರವಿ ಇದ್ದರು.

ಸ್ಪಷ್ಟನೆ: ‘ಈ ಹಿಂದೆ ತಾಲ್ಲೂಕು ಪಂಚಾಯಿತಿ ತೆಗೆದುಕೊಂಡ ನಿರ್ಣಯದಂತೆ ಕಟ್ಟಡಕ್ಕೆ ಬಾಡಿಗೆ ನಿಗದಿಪಡಿಸಲಾಗಿದೆ. ತಾವು ಅಧಿಕಾರ ವಹಿಸಿಕೊಳ್ಳುವ ಮುಂಚೆಯೇ ದರ ನಿಗದಿಯಾಗಿದೆ. ಹೊಸದಾಗಿ ನಿಗದಿಪಡಿಸಿಲ್ಲ’ ಎಂದುತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಸರ್ವೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.