ಕೋಲಾರ: ‘ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವುದರ ಜೊತೆಗೆ ಅಗತ್ಯವಾದ ಔಷಧಿಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹೊರಗೆ ಔಷಧಿ ಖರೀದಿಸಿ ಎಂದು ರೋಗಿಗಳಿಗೆ ಚೀಟಿ ಬರೆದು ಕೊಡುವುದು, ಹಣ ಕೇಳುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಶಾಸಕ ಕೊತ್ತೂರು ಮಂಜುನಾಥ್, ವೈದ್ಯರಿಗೆ ಎಚ್ಚರಿಕೆ ನೀಡಿದರು.
ನಗರದ ಕ್ಲಾಕ್ ಟವರ್ ಬಳಿಯಿರುವ ದರ್ಗಾ ಮೊಹಲ್ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕುಂದುಕೊರತೆ ಆಲಿಸಿದರು.
ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಬರುವಂತೆ ನಿಗಾ ವಹಿಸಬೇಕು. ಈ ಆಸ್ಪತ್ರೆ ಬಗ್ಗೆ ಜನರಿಗೆ ಮೆಚ್ಚುಗೆ ಇದೆ. ಆದರೆ ದುರುಪಯೋಗವಾಗಬಾರದು. ಸರ್ಕಾರಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಉಚಿತವಿದ್ದು. ಹಣ ತೆಗೆದುಕೊಳ್ಳಬಾರದು. ಆಸ್ಪತ್ರೆಯಲ್ಲಿ ಇಲ್ಲದೇ ಇರುವ ಔಷಧಗಳನ್ನೂ ಖರೀದಿ ಮಾಡಿ ನೀಡಬೇಕು ಎಂದರು.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಎಂ.ಆರ್. ಸ್ಕ್ಯಾನ್ ಮತ್ತು ಸಿಟಿ ಸ್ಕ್ಯಾನ್‌ಗೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸದಂತೆ ಎಚ್ಚರ ವಹಿಸಬೇಕು. ನಮ್ಮಲ್ಲಿರುವ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಗೆ ಕಳಿಸಿ. ಮುಂದಿನ ದಿನಗಳಲ್ಲಿ ಇಲ್ಲಿಯೇ ಆ ವ್ಯವಸ್ಥೆ ಮಾಡಲಾಗುತ್ತದೆ. ರೋಗಿಗಳಿಗೆ ವೈದ್ಯರು, ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಿ. ಆಸ್ಪತ್ರೆಯಲ್ಲಿ ಕೆಟ್ಟು ಹೋಗಿರುವ ಲಿಫ್ಟ್ ಅನ್ನು ನಾಳೆಯೇ ದುರಸ್ತಿ ಮಾಡಿ. ಆಸ್ಪತ್ರೆಯಲ್ಲಿ ನೀರಿಗೆ ಅಭಾವವಿದ್ದು, ಅವಶ್ಯವಿರುವ ಕೊಳವೆಬಾವಿ ದುರಸ್ತಿಗೆ ಕ್ರಮ ವಹಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಆಸ್ಪತ್ರೆಯಲ್ಲಿ ಲಿಫ್ಟ್, ಮೆಡಿಕಲ್ ಗ್ಯಾಸ್ ಲೈಫ್ ಲೈನ್, ನೀರು ಸೇರಿದಂತೆ ಸೌಲಭ್ಯಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.