ADVERTISEMENT

ಬಂಗಾರಪೇಟೆ: ರಸಗೊಬ್ಬರ ಮಳಿಗೆ ಮೇಲೆ ಅಧಿಕಾರಿಗಳು ದಾಳಿ

ಮಾರುತಿ ಆಗ್ರೊ ಟ್ರೇಡರ್ಸ್ ಮಾಲೀಕರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:45 IST
Last Updated 22 ಜನವರಿ 2026, 6:45 IST
ಬಂಗಾರಪೇಟೆ ನಗರದ ಎಲ್ಲೆಮಲ್ಲಪ್ಪ ರಸ್ತೆಯಲ್ಲಿರುವ ಮಾರುತಿ ಆಗ್ರೊ ಟ್ರೇಡರ್ಸ್ ಮೇಲೆ ಶನಿವಾರ ಕೃಷಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಮಳಿಗೆ ಪರಿಶೀಲನೆ ನಡೆಸಿದರು 
ಬಂಗಾರಪೇಟೆ ನಗರದ ಎಲ್ಲೆಮಲ್ಲಪ್ಪ ರಸ್ತೆಯಲ್ಲಿರುವ ಮಾರುತಿ ಆಗ್ರೊ ಟ್ರೇಡರ್ಸ್ ಮೇಲೆ ಶನಿವಾರ ಕೃಷಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಮಳಿಗೆ ಪರಿಶೀಲನೆ ನಡೆಸಿದರು    

ಬಂಗಾರಪೇಟೆ: ತಾಲ್ಲೂಕಿನ ರೈತರಿಗೆ ರಸಗೊಬ್ಬರ ಮಳಿಗೆಗಳು ರಸಗೊಬ್ಬರ ದರ ಮತ್ತು ತೂಕದಲ್ಲಿ ವಂಚಿಸುತ್ತಿದ್ದ ಬಗ್ಗೆ ಬಂದ ದೂರುಗಳ ಹಿನ್ನೆಲೆ ಕೃಷಿ ಇಲಾಖೆ ಅಧಿಕಾರಿಗಳು ನಗರದ ಎಲ್ಲೆಮಲ್ಲಪ್ಪ ರಸ್ತೆಯಲ್ಲಿರುವ ಮಾರುತಿ ಆಗ್ರೊ ಟ್ರೇಡರ್ಸ್ ಮೇಲೆ ಶನಿವಾರ ದಿಢೀರ್ ದಾಳಿ ನಡೆಸಿದ್ದಾರೆ.

ನಗರದ ಮಾರುತಿ ಆಗ್ರೊ ಟ್ರೇಡರ್ಸ್‌ನಲ್ಲಿ ರೈತರು ಖರೀದಿಸುವ ರಸಗೊಬ್ಬರಕ್ಕೆ ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ರೈತರು ಕೃಷಿ ಇಲಾಖೆಯ ಗಮನಕ್ಕೆ ತಂದಿದ್ದರು. ರೈತರ ದೂರಿಗೆ ಸ್ಪಂದಿಸಿದ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ ಅವರು ಸಿಬ್ಬಂದಿಯೊಂದಿಗೆ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆಯ ವೇಳೆ ಮಳಿಗೆಯಲ್ಲಿ ಹಲವು ಕಾನೂನು ಉಲ್ಲಂಘನೆಯಾಗಿರುವುದು ಪತ್ತೆಯಾಗಿದೆ. ನಿಯಮದಂತೆ ರಸಗೊಬ್ಬರ ದರ ಪ್ರದರ್ಶಿಸುವ ಫಲಕವನ್ನು ಹಾಕಿರಲಿಲ್ಲ. ಜೊತೆಗೆ ನಿಗದಿತ ಬೆಲೆಗಿಂತ ಅಧಿಕ ಮೊತ್ತಕ್ಕೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿತ್ತು. ವಿವಿಧ ಕಂಪನಿಗಳಿಂದ ಖರೀದಿ ಮಾಡಿದ ಸೋರ್ಸ್ ಸರ್ಟಿಫಿಕೇಟ್ ಹಾಗೂ ಇತರೆ ದಾಖಲಾತಿಗಳು ಲಭ್ಯವಿರಲಿಲ್ಲ. ರೈತರಿಗೆ ಅಧಿಕೃತ ಬಿಲ್ ನೀಡದೆ ಮತ್ತು ಅವರಿಂದ ಸಹಿ ಪಡೆಯದೆ ಮಾರಾಟ ಪ್ರಕ್ರಿಯೆ ನಡೆಯುತ್ತಿತ್ತು. ದಾಸ್ತಾನು ಪುಸ್ತಕದಲ್ಲಿರುವ ಅಂಕಿ ಅಂಶಕ್ಕೂ ಮತ್ತು ಮಳಿಗೆಯ ಗೋದಾಮಿನಲ್ಲಿರುವ ವಾಸ್ತವ ದಾಸ್ತಾನಿಗೂ ಯಾವುದೇ ತಾಳೆಯಾಗಲಿಲ್ಲ. ಈ ಎಲ್ಲಾ ಲೋಪದೋಷಗಳ ಹಿನ್ನೆಲೆ ಅಂಗಡಿ ಮಾಲೀಕ ಕೆ.ಸಿ.ರೆಡ್ಡಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ADVERTISEMENT

ನೋಟಿಸ್ ತಲುಪಿದ ಏಳು ದಿನಗಳ ಒಳಗಾಗಿ ಮಾಲೀಕರು ಉತ್ತರ ನೀಡಬೇಕು. ತಪ್ಪಿದ್ದಲ್ಲಿ ರಸಗೊಬ್ಬರ ಮಾರಾಟ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಅಲ್ಲದೆ, ಅಗತ್ಯ ವಸ್ತುಗಳ ಕಾಯ್ದೆ 1955ರ ಸೆಕ್ಷನ್ 3 ಮತ್ತು 7ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ನಿರ್ದೇಶಕಿ ಪ್ರತಿಭಾ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.