ADVERTISEMENT

ಶ್ರೀನಿವಾಸಪುರ | ಬದಲಾದ ಮಾವು ವಹಿವಾಟು ಸ್ವರೂಪ

ಕೋಲಾರ ಜಿಲ್ಲೆಯ 55 ಮಾವು ಬೆಳೆಗಾರರು ಆನ್‌ಲೈನ್‌ ವಹಿವಾಟು ನಡೆಸಲು ಒಲವು

ಆರ್.ಚೌಡರೆಡ್ಡಿ
Published 23 ಮೇ 2020, 19:45 IST
Last Updated 23 ಮೇ 2020, 19:45 IST
ಶ್ರೀನಿವಾಸಪುರದ ಸಮೀಪ ತೋಟವೊಂದರಲ್ಲಿ ಕೊಯ್ಲಿಗೆ ಬಂದಿರುವ ಮಾವಿನ ಕಾಯಿ
ಶ್ರೀನಿವಾಸಪುರದ ಸಮೀಪ ತೋಟವೊಂದರಲ್ಲಿ ಕೊಯ್ಲಿಗೆ ಬಂದಿರುವ ಮಾವಿನ ಕಾಯಿ   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಮಾವಿನ ವಹಿವಾಟಿನ ಸ್ವರೂಪ ಬದಲಾಗುತ್ತ ಬಂದಿದೆ. ಹಿಂದೆ ಮಾವು ಬೆಳೆಗಾರರು ಇಡೀ ತೋಟಗಳ ಫಸಲನ್ನೇ ಒಮ್ಮೆಯೇ ಮಾರಾಟ ಮಾಡುತ್ತಿದ್ದರು. ಈಗ ಬೇರೆ ಬೇರೆ ವಿಧಾನದಲ್ಲಿ ವಹಿವಾಟು ನಡೆಯುತ್ತಿದೆ.

ಎಪಿಎಂಸಿ ಮಾರುಕಟ್ಟೆ ಸ್ಥಾಪನೆಗೆ ಮೊದಲು ಖಾಸಗಿ ಮಂಡಿಗಳಲ್ಲಿ ವಹಿವಾಟು ನಡೆಯುತ್ತಿತ್ತು. ಮಾರುಕಟ್ಟೆ ಪ್ರಾರಂಭವಾದ ಮೇಲೆ ವಹಿವಾಟು ಪ್ರಾಂಗಣಕ್ಕೆ ಸ್ಥಳಾಂತರಗೊಂಡಿತು. ರೈತರು, ಮಂಡಿ ಮಾಲೀಕರು ಹಾಗೂ ವರ್ತಕರು ಪರಸ್ಪರ ಸಹಕಾರದಿಂದ ವಹಿವಾಟು ನಡೆಸುತ್ತಿದ್ದರು.

ಈ ಬಾರಿ ಬದಲಾದ ಪರಿಸ್ಥಿತಿಯಲ್ಲಿ ಮಂಡಿ ವ್ಯಾಪಾರದ ಮಧ್ಯೆ ಆನ್‌ಲೈನ್‌ ವಹಿವಾಟು ಪ್ರಾರಂಭವಾಗಿದೆ. ಇದು ವಿದ್ಯಾವಂತ ಮಾವು ಬೆಳೆಗಾರರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ನಗರ ಪ್ರದೇಶದ ಕಾಲೇಜುಗಳಲ್ಲಿ ಓದುತ್ತಿದ್ದ ಯುವಕರು ಕೊರೊನಾ ಹಿನ್ನೆಲೆಯಲ್ಲಿ ಹಳ್ಳಿ ಸೇರಿದ್ದಾರೆ. ಬಿಡುವಾಗಿರುವ ಈ ಯುವಕರು ಮಾವು ವಹಿವಾಟಿನ ಕಡೆ ಗಮನ ನೀಡುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಹೊಗಳಗೆರೆ ಗ್ರಾಮದ ಸಮೀಪ ಮಾವು ಅಭಿವೃದ್ಧಿ ಕೇಂದ್ರ ಪ್ರಾರಂಭಿಸಲಾಗಿದೆ. ಈ ಕೇಂದ್ರ ರಾಜ್ಯದ ಆನ್‌ಲೈನ್‌ ಮಾವು ವಹಿವಾಟಿನ ಕೇಂದ್ರ ಬಿಂದುವಾಗಿದೆ. ಕೇಂದ್ರದ ಸಹಯೋಗದೊಂದಿಗೆ ಆನ್‌ಲೈನ್‌ ಮಾವಿನ ವಹಿವಾಟು ಯಶಸ್ವಿಯಾಗಿ ನಡೆಯುತ್ತಿದೆ.

ರಾಜ್ಯದ 110 ಮಾವು ಬೆಳೆಗಾರರು ಆನ್‌ಲೈನ್‌ ಮಾವು ವಹಿವಾಟು ನಡೆಸಲು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಕೋಲಾರ ಜಿಲ್ಲೆಯ 55 ಬೆಳೆಗಾರರು ಆನ್‌ಲೈನ್‌ ವಹಿವಾಟು ನಡೆಸಲು ಒಲವು ತೋರಿದ್ದಾರೆ. ಈಗಾಗಲೆ ಒಂದು ತಿಂಗಳ ಅವಧಿಯಲ್ಲಿ 3 ಕೆಜಿ ತೂಕದ 25 ಸಾವಿರ ಬಾಕ್ಸ್‌, ಎಂದರೆ 75ಟನ್ ಮಾವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗಿದೆ.

ಆನ್‌ಲೈನ್‌ನಲ್ಲಿ ಬಾದಾಮಿ ತಳಿ ಮಾವು ಬಾಕ್ಸ್‌ಗೆ (3 ಕೆ.ಜಿ) ₹330, ಮಲ್ಲಿಕಾ ₹ 450, ಇಮಾಮ್‌ ಪಸಂದ್‌ ₹600, ಬೈಗಾನ್‌ಪಲ್ಲಿ ₹290ಕ್ಕೆ ಮಾರಾಟವಾಗುತ್ತಿದೆ. ಮಾವು ಅಭಿವೃದ್ಧಿ ಕೇಂದ್ರದಿಂದ ಬೆಳೆಗಾರರಿಗೆ ವಹಿವಾಟು ನಡೆಸಲು ಅಗತ್ಯ ತರಬೇತಿ, ಮಾರ್ಗದರ್ಶನ ಹಾಗೂ ನೆರವು ನೀಡಲಾಗುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ ಶೇ 20ರಷ್ಟು ಫಸಲು ಬಂದಿದೆ. 2 ಲಕ್ಷ ಟನ್‌ ಮಾವಿನ ಇಳುವರಿ ನಿರೀಕ್ಷಿಸಲಾಗಿದೆ. ಇದರಲ್ಲಿ 1.25 ಲಕ್ಷ ಟನ್‌ ತೋತಾಪುರಿ ತಳಿ ಮಾವು ಇದೆ. ಇದನ್ನು ರಸ ತಯಾರಿಸಲು ಬಳಸುತ್ತಾರೆ. ಉಳಿದ 75 ಸಾವಿರ ಟನ್‌ ವಿವಿಧ ತಳಿಯ ಮಾವು ತಿನ್ನಲು ಬಳಕೆ ಆಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುವರು.

ಆನ್‌ಲೈನ್‌ ಬೇಡಿಕೆಗೆ ಮಾವನ್ನು ಸಿದ್ಧಪಡಿಸಿ ಬೆಂಗಳೂರಿಗೆ ಕಳುಹಿಸುವುದು ಲಾಭದಾಯಕವಲ್ಲ. ಲಾಲ್‌ ಬಾಗ್‌ನಲ್ಲಿ ಮಾವು ಮೇಳ ಒಂದೂವರೆ ತಿಂಗಳ ಕಾಲ ನಡೆಯುತ್ತಿತ್ತು. ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮೇಳ ನಡೆಯುತ್ತಿಲ್ಲ. ಇದರಿಂದ ಬೆಳೆಗಾರರಿಗೆ ನಷ್ಟವಾಗಿದೆ ಎನ್ನುತ್ತಾರೆ ಕೆಲವು ಬೆಳೆಗಾರರು.

**

ಬೆಳೆಗಾರರಿಗೆ ಉತ್ತಮ ಬೆಲೆ
‘ರಾಜ್ಯದಲ್ಲಿ ಆನ್‌ಲೈನ್‌ ಮಾವು ವಹಿವಾಟು ಚೆನ್ನಾಗಿ ನಡೆಯುತ್ತಿದೆ. ಬೆಳೆಗಾರರಿಗೆ ಒಳ್ಳೆಯ ಬೆಲೆ ಸಿಗುತ್ತಿದೆ. ವಿದ್ಯಾವಂತ ರೈತರು ಬದಲಾವಣೆಗೆ ಸ್ಪಂದಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’.
-ಎಚ್.ಟಿ.ಬಾಲಕೃಷ್ಣ, ಉಪ ನಿರ್ದೇಶಕರು, ಮಾವು ಅಭಿವೃದ್ಧಿ ಕೇಂದ್ರ, ಹೊಗಳಗೆರೆ

**

ಆನ್‌ಲೈನ್‌ ಮಾರಾಟ ಸುಲಭವಲ್ಲ
‘ಆನ್‌ಲೈನ್‌ ಮಾವು ಮಾರಾಟ ಹೇಳಿದಷ್ಟು ಸುಲಭವಲ್ಲ. ಒಬ್ಬ ರೈತನಿಗೆ 30 ರಿಂದ 40 ಬಾಕ್ಸ್‌ ಮಾರಲು ಅವಕಾಶ ಸಿಗುತ್ತದೆ. ಖರ್ಚು ವೆಚ್ಚ ಲೆಕ್ಕ ಮಾಡಿದರೆ ಉಳಿಯುವುದು ಅಷ್ಟಕ್ಕಷ್ಟೆ. ಈ ವ್ಯವಸ್ಥೆಯಲ್ಲಿ 1 ಟನ್‌ ಹಣ್ಣು ಮಾರಾಟ ಮಾಡಲು ಎಷ್ಟು ದಿನ ಹಿಡಿಯುತ್ತದೆ ಎಂಬುದನ್ನು ಊಹಿಸಬಹುದು.
-ಡಿ.ವಿ.ರಾಜಾರೆಡ್ಡಿ, ಅಧ್ಯಕ್ಷರು, ತಾಲ್ಲೂಕು ಮಾವು ಬೆಳೆಗಾರರ ಸಂಘ, ಶ್ರೀನಿವಾಸಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.