ADVERTISEMENT

ಬುಡ್ಡಿದೀಪ: ಅಂಬೇಡ್ಕರ್‌ ಗ್ರಂಥಾಲಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:34 IST
Last Updated 12 ಡಿಸೆಂಬರ್ 2025, 5:34 IST
ಕೋಲಾರ ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಬುಡ್ಡಿದೀಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಮುಖಂಡ ಸಿಎಂಆರ್‌ ಶ್ರೀನಾಥ್ ಪಾಲ್ಗೊಂಡಿದ್ದರು
ಕೋಲಾರ ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಬುಡ್ಡಿದೀಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಮುಖಂಡ ಸಿಎಂಆರ್‌ ಶ್ರೀನಾಥ್ ಪಾಲ್ಗೊಂಡಿದ್ದರು   

ಕೋಲಾರ: ಜಾಗತೀಕರಣದ ಭರಾಟೆಯ ಈ ಗಳಿಗೆಯಲ್ಲಿ ಮಾತನಾಡುವುದು, ಕನಸು ಕಾಣುವುದು, ಆ ಕನಸುಗಳಿಗೆ ರೆಕ್ಕೆ ಕಟ್ಟುವುದು ಸುಲಭದ ಮಾತಲ್ಲ. ಈ ಕಾಲಘಟ್ಟ ಹೇಗಿದೆ ಅಂದರೆ ಮೊಬೈಲ್ ನೋಡುವುದೇ ಆಯಿತು; ಕನಸು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು.

ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಪಾಪರಾಜನಹಳ್ಳಿಯ ಬುಡ್ಡಿದೀಪದಲ್ಲಿ ಈಚೆಗೆ ನಡೆದ ಬುಡ್ಡಿ ದೀಪ ಲಿವಿಂಗ್ ಟೈಮ್ಸ್‌ ಇ ಪತ್ರಿಕೆ ಬಿಡುಗಡೆ, ಅಂಬೇಡ್ಕರ್‌ ಹಾರ್ನ್‌ ಬಿಲ್‌ ಗ್ರಂಥಾಲಯಕ್ಕೆ ಚಾಲನೆ ಹಾಗೂ ಹಲ್ಗಿ ಕಲ್ಚರ್‌ ತಮಟೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಈ ವಯಸ್ಸಿನಲ್ಲೂ ಕೋಟಿಗಾನಹಳ್ಳಿ ರಾಮಯ್ಯ ಸಾಹಿತ್ಯ ಕೃಷಿ ಮುಂದುವರಿಸುತ್ತಾ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಗತ್ಯವಾದ ಪುಸ್ತಕ ಭಂಡಾರವನ್ನೇ ತಂದು ಇಟ್ಟಿದ್ದಾರೆ. ಮಕ್ಕಳ ನಾಟಕಗಳಲ್ಲಿ ಉತ್ತಮ ಅಭಿರುಚಿಯನ್ನು ತುಂಬುತ್ತಿದ್ದಾರೆ. ವಿಶೇಷವಾಗಿ ಬಾಬಾ ಸಾಹೇಬರ ಬದುಕು ಬರಹಗಳನ್ನು ನಾಟಕಗಳ ಮೂಲಕ ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ ಎಂದರು.

ADVERTISEMENT

ರಾಮಯ್ಯ ಅವರನ್ನು ಸಮಕಾಲೀನ ಈ ಸಮಾಜ ಗುರುತಿಸದೇ ಹೋಗಬಹುದು. ಆದರೆ, ಮುಂದಿನ ಸಮಾಜ ಅಂದರೆ ಈ ಮಕ್ಕಳು ನಾಳೆ ಖಂಡಿತ ರಾಮಣ್ಣ ಅವರ ಕೆಲಸವನ್ನು ಕೊಂಡಾಡುತ್ತವೆ. ರಾಮಯ್ಯ ಅವರ ಈ ಕೆಲಸವು ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್, ‘ಇಂದು ನಾವೆಲ್ಲರೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ರಾಮಯ್ಯ ಅವರು ದಾನಿಗಳಿಂದ ಒಟ್ಟು ಗೂಡಿಸಿ ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಬೌದ್ಧಿಕತೆಗೆ ಬೇಕಾದ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ನಾವು ಶಕ್ತಿ ತುಂಬಬೇಕಿದೆ’ ಎಂದರು.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಹಿಂದೆ ಇಲ್ಲಿ ಕೂರಲು ಕುರ್ಚಿ ಇರಲಿಲ್ಲ. ಒಂದು ದಿನ ಬೆಟ್ಟಕ್ಕೆ ಬಂದಿದ್ದ ಸಿಎಂಆರ್ ಶ್ರೀನಾಥ್ ಅದನ್ನು ಗಮನಿಸಿ ಬುಡ್ಡಿದೀಪಕ್ಕೆ ಚೇರ್ ಕಳಿಸಿಕೊಟ್ಟರು. ಅಂಬೇಡ್ಕರ್ ಹಾರ್ನ್ ಲೈಬ್ರರಿ ಕೇವಲ ಮಕ್ಕಳಿಗಾಗಿ ಮಾಡಿದ್ದು. ಮುಂದಿನ ದಿನಗಳಲ್ಲಿ ಬುಡ್ಡಿದೀಪ ಸಂಶೋಧನಾ ಕೇಂದ್ರ ಆಗಬೇಕಿದೆ. ಅಂಬೇಡ್ಕರ್ ಅವರನ್ನು ಹೂಗಳಿಂದ ಕಾಣಬೇಕಿದೆ. ಹೂವು ಬೇರೆ ಅಲ್ಲ; ಅಂಬೇಡ್ಕರ್ ಬೇರೆ ಅಲ್ಲ. ಎರಡೂ ಒಂದೇ’ ಎಂದು ನುಡಿದರು.

ರಾಮಯ್ಯ ಅನುವಾದಿಸಿರುವ ‘ರತ್ತು ಕಂಡಂತೆ ಅಂಬೇಡ್ಕರ್ ಅವರ ಕೊನೆ ದಿನಗಳು’ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು. ಧಾವತಿ ಕಾದಂಬರಿ ಬಗ್ಗೆ ಜಿಲ್ಲಾಧಿಕಾರಿ ಪ್ರಶಂಸಿದರು. ಲೇಖಕ ಗಂಗಪ್ಪ ತಳವಾರ್ ಕೋಲಾರದ ಗ್ರಾಮ್ಯ ಭಾಷೆಯಲ್ಲಿ ಅದ್ಭುತವಾಗಿ ಬರೆದಿದ್ದಾರೆ ಎಂದರು.

ರಾಮಯ್ಯ ಅನುವಾದಿಸಿರುವ ‘ರತ್ತೂ ಕಂಡಂತೆ ಅಂಬೇಡ್ಕರ್ ಅವರ ಕೊನೆ ದಿನಗಳು’ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.