ADVERTISEMENT

ಅಂಬೇಡ್ಕರ್‌ ವ್ಯಕ್ತಿತ್ವ ಕೆಳ ವರ್ಗದ ಧ್ವನಿ:ಸಾಹಿತಿ ಬಿ.ಸಮತಾ ದೇಶಮಾನೆ

ಜನ್ಮ ದಿನಾಚರಣೆಯಲ್ಲಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:00 IST
Last Updated 24 ಏಪ್ರಿಲ್ 2019, 20:00 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಗಣ್ಯರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಗಣ್ಯರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಕೋಲಾರ: ‘ಅಂಬೇಡ್ಕರ್ ಬಗ್ಗೆ ಮಾತನಾಡುವುದು ಸುಲಭ. ಆದರೆ, ಜೀವನದಲ್ಲಿ ಅವರ ವಿಚಾರಧಾರೆ ಅಳವಡಿಸಿಕೊಳ್ಳುವುದು ಮುಖ್ಯ’ ಎಂದು ಸಾಹಿತಿ ಬಿ.ಸಮತಾ ದೇಶಮಾನೆ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಅಂಬೇಡ್ಕರ್ ಅವರು ಯಾರ ಸಹಾಯವೂ ಇಲ್ಲದೆ ಉನ್ನತ ಮಟ್ಟಕ್ಕೇರಿ ಅನೇಕ ಪದವಿ ಪಡೆದರು. ಈ ಕಾರಣದಿಂದಲೇ ಅವರಿಗೆ ಸಂವಿಧಾನ ರಚಿಸುವ ಅವಕಾಶ ಸಿಕ್ಕಿತು’ ಎಂದರು.

‘ಜಾಗತಿಕವಾಗಿ ಭಾರತ ಎಂದಾಕ್ಷಣ ಅಂಬೇಡ್ಕರ್‌ ಚಿಂತನೆ, ಶಿಕ್ಷಣ ಮತ್ತು ಹೋರಾಟ ಕಣ್ಣು ಮುಂದೆ ಬರುತ್ತವೆ. ದೇಶದಲ್ಲಿ ದಲಿತರು ನೀರು ಮುಟ್ಟಬಾರದ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಅಂಬೇಡ್ಕರ್‌ ಅದರ ವಿರುದ್ಧ ಹೋರಾಟ ಮಾಡಿ ಎಲ್ಲರೂ ಸಮಾನರು ಎಂಬುದನ್ನು ಅರಿತು ಸಮಾಜದಲ್ಲಿ ಒಟ್ಟಾಗಿ ಬದುಕಬೇಕೆಂದು ತೋರಿಸಿಕೊಟ್ಟರು’ ಎಂದು ಸ್ಮರಿಸಿದರು.

ADVERTISEMENT

‘ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಯಾವುದೇ ಅಧಿಕಾರ ನೀಡದಿದ್ದ ಸಂದರ್ಭದಲ್ಲಿ ಎಲ್ಲರಿಗೂ ಸಮಾನತೆ ಸಹಬಾಳ್ವೆ ನೀಡಬೇಕೆಂಬ ಉದ್ದೇಶಕ್ಕೆ, ಮಹಿಳಾ ವಿಮೋಚನೆಗೆಗಾಗಿ ಮನುಸ್ಮೃತಿ ಸುಡಲಾಗಿತ್ತು. ಅಂಬೇಡ್ಕರ್ ಈ ಹೋರಾಟದ ನೇತೃತ್ವದ ವಹಿಸಿದ್ದರು. ಈ ಹೋರಾಟವು ಅಂಬೇಡ್ಕರ್‌ರ ಮಹಿಳಾಪರ ಕಾಳಜಿಯ ದ್ಯೋತಕ’ ಎಂದು ಅಭಿಪ್ರಾಯಪಟ್ಟರು.

‘ಅಂಬೇಡ್ಕರ್‌ರ ವ್ಯಕ್ತಿತ್ವ ಯಾವಾಗಲೂ ಕೆಳ ವರ್ಗದವರ ಧ್ವನಿಯಾಗಿತ್ತು. ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಪ್ರತಿಯೊಬ್ಬರು ಮುಂದೆ ಬರಬೇಕೆಂಬ ಉದ್ದೇಶದಿಂದ ಅವರು ಮೀಸಲಾತಿ ಜಾರಿಗೆ ತರುವ ಜತೆಗೆ ರೈತರ, ಕಾರ್ಮಿಕರ ಮತ್ತು ಮಹಿಳೆಯರ ಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಶ್ರಮಿಸಿದರು’ ಎಂದು ಬಣ್ಣಿಸಿದರು.

ಸಂವಿಧಾನವೇ ತಳಹದಿ: ‘ಸಂವಿಧಾನ ಕೆಲವರಿಗೆ ಮಾತ್ರ ಸೀಮಿತವೆಂಬ ಆಲೋಚನೆ ಸರಿಯಲ್ಲ. ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಸಂವಿಧಾನವೇ ತಳಹದಿ. ಪ್ರಜೆಗಳು ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಬಡವರಿಗೆ, ಅಸಹಾಯಕ ಸ್ಥಿತಿಯಲ್ಲಿ ಇರುವರಿಗೆ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದು ಕಿವಿಮಾತು ಹೇಳಿದರು.

‘ಸಂವಿಧಾನದಿಂದ ದೇಶದ ಪ್ರತಿ ಪ್ರಜೆಗೂ ಪ್ರಾಪ್ತಿಯಾಗಿರುವ ಮತದಾನದ ಹಕ್ಕು ಕನಿಷ್ಠ ಐದು ಸಾವಿರ ಗುಂಡುಗಳಿಗೆ ಸಮ. ಅಂಬೇಡ್ಕರ್‌ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದೇ ಹಕ್ಕು ನೀಡಿದ್ದಾರೆ. ಯಾವುದೇ ವ್ಯಕ್ತಿಯನ್ನು ವಿರೋಧಿಸುವ ಮೊದಲು ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವ ಅರಿಯಬೇಕು’ ಎಂದು ಸಲಹೆ ನೀಡಿದರು.

ಅಭಿವೃದ್ಧಿಗೆ ದಾರಿಯಾಗಿ: ‘ಯಾವುದೇ ಜಯಂತಿ ಆಚರಿಸಿದರೂ ಮಹನೀಯರ ಸಂದೇಶವನ್ನು ಯುವಕ ಯುವತಿಯರಿಗೆ ತಿಳಿಸಿ ಹೆಚ್ಚಿನ ಸಫಲತೆ ಪಡೆದು ದೇಶದ ಅಭಿವೃದ್ಧಿಗೆ ದಾರಿಯಾಗಬೇಕು’ ಎಂದು ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ಟಿ.ಡಿ ಕೆಂಪರಾಜು ಆಶಿಸಿದರು.

‘ಶಿಕ್ಷಣ, ಸಂಘಟನೆ ಮತ್ತು ಹೋರಾಟ ಒಂದು ಸನ್ನಿವೇಶಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ಅಂಬೇಡ್ಕರ್ ಅವರ ಸಾಮಾಜಿಕ ಕಳಕಳಿಯಿಂದ ಎಲ್ಲರಿಗೂ ಶಿಕ್ಷಣ, ಉದ್ಯೋಗ, ರಾಜಕೀಯ ಅವಕಾಶ ಸಿಕ್ಕಿದೆ. ಸರ್ವರಿಗೆ ಸಮಬಾಳು ಕಲ್ಪನೆಯೊಂದಿಗೆ ಅಂಬೇಡ್ಕರ್‌ ಸಂವಿಧಾನ ರಚಿಸಿದ್ದಾರೆ’ ಎಂದು ಹೇಳಿದರು.

ಘನತೆ ಹೆಚ್ಚಿಸಿದೆ: ‘ಅಂಬೇಡ್ಕರ್‌ ಹೋರಾಟದ ಫಲವಾಗಿ ನಮ್ಮಂತಹವರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಅಂಬೇಡ್ಕರ್‌ರ ಜಯಂತಿಯನ್ನು ವಿಶ್ವ ಜ್ಞಾನ ದಿನವಾಗಿ ವಿಶ್ವಸಂಸ್ಥೆ ಘೋಷಿಸಿರುವುದು ಅವರ ಘನತೆ ಹೆಚ್ಚಿಸಿದೆ’ ಎಂದು ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಿ.ಡೊಮಿನಿಕ್ ಅಭಿಪ್ರಾಯಪಟ್ಟರು.

ವಿ.ವಿ ಕುಲಸಚಿವರಾದ (ಮೌಲ್ಯಮಾಪನ) ಪ್ರೊ.ಕೆ.ಜನಾರ್ದನಂ, ಪ್ರೊ.ಎಂ.ಎಸ್.ರೆಡ್ಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.