ADVERTISEMENT

‘ಸಂಘಟಿತ ಹೋರಾಟ ಅಗತ್ಯ’

ಬಂಗಾರಪೇಟೆ ತಾಲ್ಲೂಕಿನಲ್ಲಿ 250 ಕೆರೆಗಳು ಒತ್ತುವರಿ: ರೈತ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 7:24 IST
Last Updated 8 ಜನವರಿ 2021, 7:24 IST
ಬಂಗಾರಪೇಟೆ ತಾಲ್ಲೂಕು ಕಚೇರಿ ಮುಂಭಾಗ ರೈತ ಸಂಘದ ಸದಸ್ಯರು ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಜನ್ಮ ದಿನ ಆಚರಿಸಿದರು. ತಹಶೀಲ್ದಾರ್ ದಯಾನಂದ ಇದ್ದರು
ಬಂಗಾರಪೇಟೆ ತಾಲ್ಲೂಕು ಕಚೇರಿ ಮುಂಭಾಗ ರೈತ ಸಂಘದ ಸದಸ್ಯರು ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಜನ್ಮ ದಿನ ಆಚರಿಸಿದರು. ತಹಶೀಲ್ದಾರ್ ದಯಾನಂದ ಇದ್ದರು   

ಬಂಗಾರಪೇಟೆ: ಸಂಘಟನೆಯ ಕೊರತೆಯಿಂದಾಗಿ ರೈತರು ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಪಡೆಯಲು ಸಾಧ್ಯವಾಗಿಲ್ಲ. ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಬಾಬಾ ಸಾಹೇಬರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ತಹಶೀಲ್ದಾರ್ ದಯಾನಂದಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ರೈತ ಸಂಘ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೋರಾಟವನ್ನು ಮೊದಲು ಆಯ್ಕೆ ಮಾಡಿಕೊಂಡಿದ್ದು, ಸಂಘಟನೆ, ಶಿಕ್ಷಣವನ್ನು ಕಡೆಗಣಿಸಲಾಗಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಾವ ಕಾಲಕ್ಕೆ ಯಾವ ಬೆಳೆ ಬೆಳೆಯಬೇಕು ಎನ್ನುವ ಬಗ್ಗೆ ಅರಿವು ಇಲ್ಲ ಎಂದು ವಿಷಾದಿಸಿದರು.

ADVERTISEMENT

ಎಲ್ಲ ಕ್ಷೇತ್ರಗಳು ನಿಂತರೂ ಕೃಷಿ ಕ್ಷೇತ್ರ ಎಂದಿಗೂ ನಿಲ್ಲುವುದಿಲ್ಲ. ಒಂದು ವೇಳೆ ಕೃಷಿ ಕ್ಷೇತ್ರ ನಿಂತರೆ ಮನುಷ್ಯನ ಬದುಕು ದುಸ್ತರವಾಗಲಿದೆ. ರೈತನ ಕೆಲಸ ಮಹತ್ವದ್ದಾಗಿದೆ ಎಂದರು.

ಡಿವೈಎಸ್‌ಪಿ ಉಮೇಶ್ ಮಾತನಾಡಿ, ಮಗುವಿಗೆ ಹಸಿವಾದಾಗ ತಾಯಿಯನ್ನು ಕೇಳಿ ಹಾಲು ಪಡೆದುಕೊಳ್ಳುವಂತೆಯೇ ರೈತರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಅದಕ್ಕೆ ಮುಖ್ಯವಾಗಿ ಸಂಘಟನೆ ಅಗತ್ಯ ಎಂದು ಹೇಳಿದರು.

ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ತಾಲ್ಲೂಕಿನ ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಯರಗೋಳ್ ಯೋಜನೆಯನ್ನು ಶೀಘ್ರವೇ ಉದ್ಘಾಟನೆ ಮಾಡಬೇಕು. ನಿರ್ಲಕ್ಷಿಸಿದ್ದಲ್ಲಿ ಮುಖ್ಯಮಂತ್ರಿಗೆ ಘೇರಾವ್ ಹಾಕಲಾಗುವುದು ಎಂದರು.

ತಾಲ್ಲೂಕಿನಲ್ಲಿ ಸುಮಾರು 250ಕ್ಕೂ ಹೆಚ್ಚಿನ ಕೆರೆಗಳು ಒತ್ತುವರಿಯಾಗಿವೆ. ಹಂಚಾಳ ಗೇಟ್ ಬಳಿ ಪೊಲೀಸ್ ಠಾಣೆಗೆ ಮೀಸಲಿಟ್ಟಿದ್ದ ಜಾಗವೂ ಒತ್ತುವರಿಯಾಗಿದ್ದು, ತೆರವು ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಲಯ ಅರಣ್ಯ ಅಧಿಕಾರಿಸಂತೋಷ್ ಮಾತನಾಡಿ, ಆನೆ ಕಾರಿಡಾರ್ ಯೋಜನೆಗೆ 4 ವರ್ಷದ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದುವರೆಗೂ 400ಕ್ಕೂ ಹೆಚ್ಚು ಕಾಡಾನೆ ದಾಳಿ ಪ್ರಕರಣ ದಾಖಲಾಗಿದ್ದು, ₹ 40 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ಲಕ್ಕೂರು ಗ್ರಾಮದ ಎರಡಯ ವರ್ಷದ ಬಾಲಕ ತಾನಿಶ್, ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರು, ಪೌರಕಾರ್ಮಿಕರು, ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಗ್ರಾಮೀಣ ಪ್ರದೇಶದ ಶೈಲಿಯಲ್ಲಿ ದವಸ ಧಾನ್ಯಗಳಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಭತ್ತ, ರಾಗಿ ಮತ್ತು ತರಕಾರಿ ಹಂಚಿ ರೈತ ದಿನಾಚರಣೆ ಆಚರಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಐತಾಂಡಹಳ್ಳಿ ಮುನ್ನಾ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಎ. ನಳಿನಿಗೌಡ, ಮಹಾಲಕ್ಷ್ಮಿ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಕೆಜಿಎಫ್ ಅಧ್ಯಕ್ಷ ಅಲ್ತಾಫ್, ಮಾಲೂರು ಅಧ್ಯಕ್ಷ ಮಾಸ್ತಿ ವೆಂಕಟೇಶ್, ಚಾಂದ್‌ಪಾಷಾ, ಜಾವೇದ್‌ ಪಾಷಾ, ಕಿರಣ್, ಸುಪ್ರೀಂಚಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.