
ವೇಮಗಲ್: ಕರ್ನಾಟಕದ ಗತವೈಭವದ ನೆನಪುಗಳನ್ನು ಒಡಲಿನಲ್ಲಿ ಇಟ್ಟುಕೊಂಡು, ಕೆ.ಸಿ. ವ್ಯಾಲಿ ಯೋಜನೆಯ ಆಸರೆಯಿಂದ ನವಜೀವ ಪಡೆದ ವೇಮಗಲ್ ಹೋಬಳಿಯ ಎಸ್. ಅಗ್ರಹಾರ ಕೆರೆಯು ಕೋಲಾರ ಜಿಲ್ಲೆಯ ಆಕರ್ಷಣೆಯ ಕೇಂದ್ರಬಿಂದುವಾಗುವ ಸಾಮರ್ಥ್ಯ ಹೊಂದಿದೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕೆರೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸುತ್ತಮುತ್ತಲಿನ ಗ್ರಾಮಸ್ಥರು.
ಒಂದು ಸಾವಿರ ಹೆಕ್ಟೇರ್‌ಗೂ ಹೆಚ್ಚು ವಿಸ್ತೀರ್ಣವಿರುವ ಈ ಬೃಹತ್ ಕೆರೆಯನ್ನು ಕೇವಲ ನೀರಾವರಿ ಮೂಲವಾಗಿಯಷ್ಟೇ ಕಾಣದೆ, ಬಹುಮುಖಿ ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನ ಉತ್ಪಾದನೆ ತಾಣವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ.
ಎಸ್. ಅಗ್ರಹಾರ ಕೆರೆಯು ಕರ್ನಾಟಕದ ಇತಿಹಾಸದ ಆಳವಾದ ಬೇರುಗಳನ್ನು ಹೊಂದಿದೆ. ಈ ಕೆರೆ ನಿರ್ಮಾಣ ಕಾಮಗಾರಿಯು ಪಶ್ಚಿಮ ಗಂಗರ ಕಾಲದಲ್ಲಿಯೇ ಆರಂಭಗೊಂಡಿತು ಎಂಬುದಾಗಿ ಪ್ರಾದೇಶಿಕ ಇತಿಹಾಸ ಮತ್ತು ಸ್ಥಳೀಯ ಶಾಸನಗಳು ತಿಳಿಸುತ್ತವೆ. ಕೋಲಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಗಂಗರ ಪ್ರಮುಖ ಆಡಳಿತ ಕೇಂದ್ರಗಳಾಗಿದ್ದವು.
ನಂತರದ ಅವಧಿಯಲ್ಲಿ ತಮಿಳುನಾಡಿನಿಂದ ಬಂದ ಚೋಳರು ತಮ್ಮ ನೀರಾವರಿ ಮತ್ತು ಜಲ ನಿರ್ವಹಣೆ ಪ್ರಖರತೆ ಪ್ರದರ್ಶಿಸಿದರು. ಚೋಳರ ರಾಜರು ಕೃಷಿ ಉತ್ಪಾದನೆಗೆ ನೀಡುತ್ತಿದ್ದ ಮಹತ್ವದಿಂದಾಗಿ ಈ ಕೆರೆಯು ಜೀರ್ಣೋದ್ಧಾರಗೊಂಡು ಮತ್ತಷ್ಟು ವಿಸ್ತಾರವಾಯಿತು. ಅಂತಿಮವಾಗಿ, ವಿಜಯನಗರ ಸಂಸ್ಥಾನದ ಅರಸರ ಆಳ್ವಿಕೆಯಲ್ಲಿ ಈ ಕೆರೆ ಪೂರ್ಣಪ್ರಮಾಣದ ಅಭಿವೃದ್ಧಿ ಕಂಡಿತು. ಹೀಗೆ ಗಂಗ, ಚೋಳ ಮತ್ತು ವಿಜಯನಗರದ ಮೂರು ಮಹತ್ವದ ರಾಜವಂಶಗಳ ಕೊಡುಗೆ ಪಡೆದ ಈ ಕೆರೆಯು ಕೋಲಾರದ ಜಲಪಾರಂಪರಿಕ ತಾಣವಾಗಿದೆ. ಈ ಇತಿಹಾಸ ಸಾರುವ ಫಲಕಗಳನ್ನು ಕೆರೆಯ ಸುತ್ತ ಅಳವಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಕೆ.ಸಿ. ವ್ಯಾಲಿಯಿಂದ ಸಂಸ್ಕರಿಸಿದ ನೀರು ನಿರಂತರವಾಗಿ ಹರಿದುಬರುತ್ತಿರುವ ಕಾರಣ ಸುಮಾರು 1,000 ಹೆಕ್ಟೇರ್ ಪ್ರದೇಶದ ಎಸ್. ಅಗ್ರಹಾರ ಕೆರೆಯು ವರ್ಷವಿಡೀ ಸಮೃದ್ಧ ನೀರಿನಿಂದ ತುಂಬಿರುತ್ತದೆ. ಹೀಗಾಗಿ, ಈ ಕೆರೆಯು ಅಂತರ್ಜಲ ಮತ್ತು ಕೃಷಿ ಚಟುವಟಿಕೆಗಳಿಗಷ್ಟೇ ಸೀಮಿತಗೊಳಿಸದೆ ಪ್ರವಾಸೋದ್ಯಮವಾದ ಸುರಕ್ಷಿತ ಬೋಟಿಂಗ್, ಪ್ರವಾಸಿ ದೋಣಿಗಳು, ಜೆಟ್ ಸ್ಕೀಯಿಂಗ್, ಫೆರ್ರಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದರೆ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರನ್ನು ಸೆಳೆಯಲಿದೆ ಎನ್ನುತ್ತಾರೆ ಸ್ಥಳೀಯರು.
ಎಸ್. ಅಗ್ರಹಾರ ಕೆರೆಯು ನಮ್ಮ ಯುವ ಪೀಳಿಗೆಗೆ ಉದ್ಯೋಗ ಮತ್ತು ಸುಂದರ ಭವಿಷ್ಯ ನೀಡುವ ಸಾಮರ್ಥ್ಯ ಹೊಂದಿದೆ. ಕೆ.ಸಿ. ವ್ಯಾಲಿ ಯೋಜನೆಯು ಈ ಕೆರೆಗೆ ನೀರುಣಿಸಿದೆ.ಅಜಯ್ ಕುಮಾರ್ ರಾಜಕಲ್ಲಹಳ್ಳಿ ನಿವಾಸಿ
ಜೀವಕಳೆ ತಂದ ಕೆ.ಸಿ. ವ್ಯಾಲಿ ಕೆ.ಸಿ ವ್ಯಾಲಿಯಿಂದ ಎಸ್. ಅಗ್ರಹಾರ ಕೆರೆಗೆ ನೀರು ಹರಿದಾಗಿನಿಂದಲೂ ನಮ್ಮ ಕೆರೆಗೆ ಹೊಸ ಜೀವಕಳೆ ಬಂದಿದೆ. ಕೆರೆಯ ಕೋಡಿ ತುಂಬಿ ಹರಿದಾಗ ಇಲ್ಲಿ ಜಾತ್ರೆ ಶುರುವಾದಂತೆಯೇ. ನಾವು ಯಾವುದೇ ಪ್ರಚಾರ ಮಾಡಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಚಿತ್ರ ಅಥವಾ ವಿಡಿಯೊ ಹಾಕಿದ ತಕ್ಷಣವೇ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಚಿಕ್ಕಬಳ್ಳಾಪುರ ತುಮಕೂರು ಸೇರಿದಂತೆ ಹತ್ತಾರು ಜನ ಕಾರು ಬೈಕ್‌ಗಳಲ್ಲಿ ಬಂದು ರಮಣೀಯವಾದ ದೃಶ್ಯ ವೈಭವವನ್ನು ಅನುಭವಿಸುತ್ತಾರೆ. ಯಾವುದೇ ಅಭಿವೃದ್ಧಿ ಮೂಲ ಸೌಕರ್ಯವಿಲ್ಲದೆ ಇಷ್ಟೊಂದು ಜನರು ಬರುತ್ತಾರೆ ಎಂದಾದರೆ ಸರ್ಕಾರ ಈ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಇನ್ನೂ ಹೆಚ್ಚಿನ ಜರು ಬರುವ ನಿರೀಕ್ಷೆಯಿದೆ. ಹೀಗಾದಲ್ಲಿ ಇಲ್ಲಿನ ಯುವಕರಿಗೆ ಇಲ್ಲೇ ಕೆಲಸ ಸಿಗುತ್ತದೆಕಾಂತರಾಜು ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.