ಕೋಲಾರ: ಸದಾ ಪ್ರವಾಸಿಗರು, ಚಾರಣಿಗರನ್ನು ಆಕರ್ಷಿಸುವ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ಈಗ ಕಿರು ಜಲಪಾತ ಸೃಷ್ಟಿಯಾಗಿದೆ.
ಕೆಲ ದಿನಗಳಿಂದ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಧಾರಾಕಾರ ಮಳೆಯಾಗುತ್ತಿದ್ದು, ಶತಶೃಂಗ ಪರ್ವತ ಶ್ರೇಣಿಯ ಅಂತರಗಂಗೆ ಬೆಟ್ಟದಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಇದು ಮಕ್ಕಳು ಹಾಗೂ ಯುವತಿಯರ ಖುಷಿಗೆ ಕಾರಣವಾಗಿದ್ದು, ನೀರಿನಲ್ಲಿ ಆಟದಲ್ಲಿ ತಲ್ಲೀನರಾಗುತ್ತಿದ್ದಾರೆ.
ಕಾಡಿನ ಮಧ್ಯೆ, ಕಲ್ಲುಗಳ ಹಾದಿಯಲ್ಲಿ ಹಾಲಿನ ನೊರೆಯಂತೆ ಮೈದುಂಬಿ ಹರಿಯುತ್ತಿದ್ದು ನೋಡುಗರ ಮನಸೂರೆಗೊಳ್ಳುತ್ತಿದೆ. ಸುಮಾರು 30 ಅಡಿ ಎತ್ತರದಿಂದ ನೀರು ಧುಮ್ಮಿಕುತ್ತಿದೆ. ಜೊತೆಗೆ ಈ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ.
ದಕ್ಷಿಣ ಕಾಶಿ ಎಂದೇ ಈ ಪ್ರದೇಶ ಪ್ರಸಿದ್ಧಿ ಪಡೆದಿದ್ದು, ಕಾಶಿ ವಿಶ್ವೇಶ್ವರ ಸ್ವಾಮಿ ದೇಗುಲವಿದೆ. ಇಲ್ಲಿನ ಕಲ್ಯಾಣಿ ಬಳಿ ಇರುವ ಬಸವನ ಬಾಯಿಯಿಂದ ವರ್ಷಪೂರ್ತಿ ನೀರು ಬರುತ್ತಿರುತ್ತದೆ. ಹೀಗಾಗಿ, ಪ್ರತಿ ಶನಿವಾರ, ಭಾನುವಾರ ಬೆಂಗಳೂರಿನಿಂದ ಪ್ರವಾಸಿಗರು ಅದರಲ್ಲೂ ಟೆಕ್ಕಿಗಳು ಹೆಚ್ಚಾಗಿ ಬರುತ್ತಾರೆ. ಪ್ರೇಮಿಗಳ ನೆಚ್ಚಿನ ತಾಣ ಎನಿಸಿದೆ.
ಹಿಂದೊಮ್ಮೆ ಬರದ ನಾಡು, ಬಯಲು ಪ್ರದೇಶವೆಂದು ಕರೆಸಿಕೊಳ್ಳುತ್ತಿದ್ದ ಕೋಲಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಹೀಗಾಗಿ, ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.