ADVERTISEMENT

ಪಕ್ಷ ವಿರೋಧಿ ಚಟುವಟಿಕೆ: ಉಚ್ಛಾಟನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 16:02 IST
Last Updated 10 ಆಗಸ್ಟ್ 2020, 16:02 IST

ಕೋಲಾರ: ‘ಪಕ್ಷದ ಮುಳಬಾಗಿಲು ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ವಿಜಯ್‌ಕುಮಾರ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಪಕ್ಷದಿಂದ ಉಚ್ಛಾಟಿಸಲಾಗಿದೆ’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಜಯಪ್ರಕಾಶ್ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಕ್ಷದ ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಭಾಗೀಯ ಕಾರ್ಯದರ್ಶಿ ಹಾಗೂ ಉಸ್ತವಾರಿ ಪಿ.ವಿ.ನಾಗಪ್ಪ ಅವರ ಆದೇಶದನ್ವಯ ವಿಜಯ್‌ಕುಮಾರ್‌ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಲಾಗಿದೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಹಾಗೂ ಗ್ರಾ.ಪಂ ಮಟ್ಟದಲ್ಲಿ ಪಕ್ಷ ಸಂಘಟಿಸುತ್ತೇವೆ. ಸಮಿತಿ ರಚಿಸುವುದರ ಜತೆಗೆ ಸದಸ್ಯತ್ವ ನೋಂದಣಿ ಮತ್ತು ಗುರುತಿನ ಚೀಟಿ ವಿತರಣೆ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಪ್ರತಿ ತಾಲ್ಲೂಕು ಮಟ್ಟದಲ್ಲಿ 15ರಿಂದ 20 ಸಾವಿರ ಸದಸ್ಯತ್ವ ನೋಂದಣಿ ಮಾಡಿಸುವ ಮೂಲಕ ಜಿಲ್ಲೆಯಲ್ಲಿ 1 ಲಕ್ಷ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ. ಪಕ್ಷ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಬಿಎಸ್‌ಪಿ ಮುಳಬಾಗಿಲು ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಮೊಹಮ್ಮದ್ ರಫಿ, ಪ್ರಧಾನ ಕಾರ್ಯದರ್ಶಿ ಚಂಗಲರಾಯ ಶೆಟ್ಟಿ, ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ವಿ ಚಂದ್ರಪ್ಪ, ಕೆಜಿಎಫ್ ತಾಲ್ಲೂಕು ಘಟಕದ ಅಧ್ಯಕ್ಷ ಮನಮೋಹನ್, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥ್, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.