ADVERTISEMENT

ಎಪಿಎಂಸಿ ಸ್ಥಳಾಂತರ: ಜಮೀನಿಗೆ ಮನವಿ

ಆಡಳಿತ ಮಂಡಳಿ–ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ: ರೈತ ಸಂಘ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 16:07 IST
Last Updated 24 ಫೆಬ್ರುವರಿ 2021, 16:07 IST
ಜಿಲ್ಲಾ ಕೇಂದ್ರದ ಎಪಿಎಂಸಿ ಸ್ಥಳಾಂತರಕ್ಕೆ ಅಗತ್ಯವಿರುವ ಜಮೀನು ಮಂಜೂರು ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕೇಂದ್ರದ ಎಪಿಎಂಸಿ ಸ್ಥಳಾಂತರಕ್ಕೆ ಅಗತ್ಯವಿರುವ ಜಮೀನು ಮಂಜೂರು ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಜಿಲ್ಲಾ ಕೇಂದ್ರದ ಎಪಿಎಂಸಿ ಸ್ಥಳಾಂತರಕ್ಕೆ ಅಗತ್ಯವಿರುವ 40 ಎಕರೆ ಜಮೀನು ಮಂಜೂರು ಮಾಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

‘ಎಪಿಎಂಸಿ ಆವರಣ ತುಂಬಾ ಕಿರಿದಾಗಿದೆ. ಈ ಸಂಬಂಧ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ದೂರು ಕೊಟ್ಟು ಮಾರುಕಟ್ಟೆ ವಿಸ್ತರಣೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿ ಆಡಳಿತ ಮಂಡಳಿಗೆ ಸುಂಕದ ರೂಪದಲ್ಲಿ ಕೋಟಿಗಟ್ಟಲೆ ಆದಾಯ ಬರುತ್ತದೆ. ಆದರೆ, ಆಡಳಿತ ಮಂಡಳಿಯು ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾರುಕಟ್ಟೆ ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾದ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ADVERTISEMENT

‘ಏಷ್ಯಾ ಖಂಡದಲ್ಲಿ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಿಂದ ಟೊಮೆಟೊ ಮತ್ತು ತರಕಾರಿಗಳು ದೇಶ ವಿದೇಶಕ್ಕೆ ರಫ್ತಾಗುತ್ತವೆ. ಆದರೆ, ಮಾರುಕಟ್ಟೆಯಲ್ಲಿನ ಜಾಗದ ಸಮಸ್ಯೆ ಕಾರಣಕ್ಕೆ ವರ್ತಕರು ಈ ಎಪಿಎಂಸಿಗೆ ಬರಲು ಹಿಂದೇಟು ಹಾಕುತ್ತಾರೆ. ಜನಪ್ರತಿನಿಧಿಗಳು ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದರು.

ಮೀನಮೇಷ: ‘ರಾತ್ರೋರಾತ್ರಿ ಸಾವಿರಾರು ಎಕರೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಂಜೂರು ಮಾಡಲು ಜಾಗವಿದೆ. ಆದರೆ, ಮಾರುಕಟ್ಟೆಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಜಮೀನು ಕೊಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ. ಜಾಗದ ಸಮಸ್ಯೆಯಿಂದಾಗಿ ರೈತರು ಹಾಗೂ ವರ್ತಕರು ಬವಣೆ ಪಡುವಂತಾಗಿದೆ’ ಎಂದು ಸಂಘಟನೆ ಸದಸ್ಯರು ಕಿಡಿಕಾರಿದರು.

‘ಮಾರುಕಟ್ಟೆಯಲ್ಲಿ ರೈತರ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆಯಿಲ್ಲ. ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದ್ದು, ನಿಯಮಬಾಹಿರವಾಗಿ ಕಮಿಷನ್ ಪಡೆಯಲಾಗುತ್ತಿದೆ. ಮತ್ತೊಂದೆಡೆ ಕೃಷಿ ಉತ್ಪನ್ನಗಳ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ರೈತರು ಈ ಅಕ್ರಮ ಪ್ರಶ್ನಿಸಿದರೆ ಮಂಡಿ ಮಾಲೀಕರು ಹರಾಜು ನಡೆಸುವುದಿಲ್ಲ ಎಂದು ಬೆದರಿಸುತ್ತಾರೆ’ ಎಂದು ಆರೋಪಿಸಿದರು.

‘ಎಪಿಎಂಸಿಗೆ ಜಮೀನು ಪಡೆಯಲು ಕಳೆದೊಂದು ದಶಕದಿಂದ ಹೋರಾಟ ನಡೆಸಲಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಂಗಸಂದ್ರ, ಚೆಲುವನಹಳ್ಳಿ ಬಳಿ ಜಮೀನು ಗುರುತಿಸಿರುವುದಾಗಿ ನೆಪ ಮಾತ್ರಕ್ಕೆ ಪತ್ರಿಕಾ ಹೇಳಿಕೆ ನೀಡಿ ಕಾಲಹರಣ ಮಾಡುತ್ತಿದ್ದಾರೆ. ಜಮೀನು ಮಂಜೂರು ಮಾಡಲು ಸಾಧ್ಯವಾಗದಿದ್ದರೆ ಜಿಲ್ಲೆಯನ್ನು ಆಂಧ್ರಪ್ರದೇಶಕ್ಕೆ ಸೇರಿಸಿ’ ಎಂದು ಗುಡುಗಿದರು.

ಸದ್ಯದಲ್ಲೇ ಬಗೆಹರಿಸುತ್ತೇವೆ: ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಎಪಿಎಂಸಿ ಕಾರ್ಯದರ್ಶಿ ಮತ್ತು ನಿರ್ದೇಶಕರ ಸಮಿತಿಯ ಸಭೆ ಕರೆಯಲಾಗಿದೆ. ಮಂಗಸಂದ್ರ ಮತ್ತು ಚೆಲುವನಹಳ್ಳಿ ಬಳಿ ಜಮೀನು ಗುರುತಿಸಿದ್ದು, ಎಪಿಎಂಸಿ ಜಾಗದ ಸಮಸ್ಯೆ ಸದ್ಯದಲ್ಲೇ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಸದಸ್ಯರಾದ ಚಾಂದ್ ಪಾಷಾ, ಕಿರಣ್, ನಾಗೇಶ್, ನಾರಾಯಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.