ADVERTISEMENT

ಕಾಲುಬಾಯಿ ಜ್ವರ ಹತೋಟಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಮೇ 2021, 15:30 IST
Last Updated 9 ಮೇ 2021, 15:30 IST

ಕೋಲಾರ: ಹಸುಗಳಿಗೆ ಕಾಲುಬಾಯಿ ಜ್ವರ ತೀವ್ರವಾಗಿ ವ್ಯಾಪಿಸುತ್ತಿದ್ದು, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಹೈನೋದ್ಯಮ ನಂಬಿಕೊಂಡಿರುವ ರೈತ ಕುಟುಂಬಗಳ ನೆರವಿಗೆ ಧಾವಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಮಾಡಿದ್ದಾರೆ.

ಹೈನುಗಾರಿಕೆಯು ಜಿಲ್ಲೆಯ ಜೀವನಾಡಿಯಾಗಿದ್ದು, ಬಹುಪಾಲು ರೈತರು ಕೃಷಿಯ ಜತೆಗೆ ಉಪ ಕಸುಬಾಗಿ ಜಾನುವಾರು ಸಾಕಿದ್ದಾರೆ. ಹೈನೋದ್ಯಮವು ರೈತರ ಪ್ರಮುಖ ಆದಾಯ ಮೂಲವಾಗಿದೆ. ರೈತರು ಹಸು ಹಾಗೂ ಎಮ್ಮೆ ಹಾಲನ್ನು ಡೇರಿಗೆ ಹಾಕಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಸು ಸೇರಿದಂತೆ ಜಾನುವಾರುಗಳಲ್ಲಿ ಕಳೆದ ಕೆಲ ದಿನಗಳಿಂದ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತಿದೆ. ಗ್ರಾಮಗಳಲ್ಲಿ ಹಸುಗಳಿಂದ ಹಸುಗಳಿಗೆ ಕಾಯಿಲೆ ಹರಡುವ ಆತಂಕ ಮನೆ ಮಾಡಿದೆ. ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಈಗಾಗಲೇ ಸಮಸ್ಯೆ ಅನುಭವಿಸುತ್ತಿರುವ ರೈತರು ಕಾಲುಬಾಯಿ ಜ್ವರದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಕಾಲುಬಾಯಿ ಜ್ವರಕ್ಕೆ ತುತ್ತಾಗಿರುವ ಹಸು, ಎಮ್ಮೆ, ಕುರಿ, ಮೇಕೆಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ. ಸೋಂಕು ನಾಯಿ ರೋಗಕ್ಕೆ ತಿರುಗಿ ಜಾನುವಾರುಗಳು ಗರ್ಭ ಧರಿಸುತ್ತಿಲ್ಲ. ಸಮಸ್ಯೆ ಗಂಭೀರವಾಗಿದ್ದರೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳು ಕಾಯಿಲೆ ಹತೋಟಿಗೆ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದ್ದಾರೆ.

ಪಶು ವೈದ್ಯರು ಕೋವಿಡ್‌ ಮತ್ತು ಲಾಕ್‌ಡೌನ್‌ನ ಸಬೂಬು ಹೇಳುತ್ತಾ ಗ್ರಾಮಗಳಿಗೆ ಬಂದು ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳು ವಿಶೇಷ ವೈದ್ಯರ ತಂಡ ರಚಿಸಿ ಕಾಲುಬಾಯಿ ಜ್ವರ ಹತೋಟಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.