ADVERTISEMENT

ಶಂಕಿತ ಉಗ್ರರ ಬಂಧನ: ಎನ್‌ಐಎಯಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 9:20 IST
Last Updated 25 ಫೆಬ್ರುವರಿ 2020, 9:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದನೆ ಸಂಘಟನೆಯ ಶಂಕಿತ ಉಗ್ರ ಮೆಹಬೂಬ್‌ ಪಾಷಾ ಜತೆ ನಂಟು ಹೊಂದಿದ್ದ ವ್ಯಕ್ತಿಗಳಿಗೆ ಆಶ್ರಯ ನೀಡಿದ್ದ ಮನೆಗೆ ನ್ಯಾಷನಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ (ಎನ್‌ಐಎ) ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಂಕಿತ ಉಗ್ರನಿಗೆ ಆಶ್ರಯ ನೀಡಿದಂತಹ ಕೋಲಾರದ ಪ್ರಶಾಂತ್ ನಗರದ ಮೊಹಮ್ಮದ್ ಜಹೀದ್ (೨೪) ಹಾಗೂ ಬೀಡಿ ಕಾಲೋನಿ ನಿವಾಸಿ ಸಲೀಂ ಖಾನ್ (೪೨) ಮನೆಗೆ ಭೇಟಿ ನೀಡಿದ 6 ಮಂದಿ ಅಧಿಕಾರಿಗಳು ತನಿಖೆ ನಡೆಸಿದರು.

ಹಿಂದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಿಸಿಬಿ ಪೊಲೀಸರು ಶಂಕಿತ ಉಗ್ರ ಮೆಹಬೂಬ್ ಪಾಷನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಕೋಲಾರದಲ್ಲಿ ಐದು ದಿನಗಳ ಕಾಲ ಆಶ್ರಯ ಪಡೆದಿದ್ದ ಮಾಹಿತಿ ಬೆಳಕಿಗೆ ಬಂದಿತ್ತು.

ADVERTISEMENT

ನಗರ ಹೊರವಲಯದ ಖಾದ್ರಿಪುರ ಗ್ರಾಮದ ಹೊರವಲಯದ ಬೆಟ್ಟದ ತಪ್ಪಲಿನಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ದಿನಗಳ ಕಾಲ ಮೆಹಬೂಬ್ ಪಾಷ ಆಶ್ರಯ ಕಲ್ಪಿಸಿದ ಇಬ್ಬರ ಮೇಲೆ ನಿಗಾ ವಹಿಸಿದ್ದ ತಮಿಳುನಾಡಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಲ್ಯಾಪ್‌ಟಾಪ್ ಸೇರಿದಂತೆ ದಾಖಲೆಗಳನ್ನು ವಶಪಡಿಸಿಕೊಂಡು ಹೋಗಿದ್ದರು, ಅದರಂತೆ ಬೆಂಗಳೂರು ಸಿಸಿಬಿ ಪೊಲೀಸರು ತನಿಖೆಯನ್ನು ಚುರುಗೊಳಿಸಿದ್ದರು.

ನಗರಕ್ಕೆ ಬಂದಿದ್ದ ಎನ್‌ಐಎ ತಂಡದವರು ಶಂಕಿತ ಉಗ್ರ ಮೊಹಬೂಬ್ ತಂಗಿದ್ದ ಮನೆ, ಸಲೀಂ ಹಾಗೂ ಜಹೀದ್ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ನಗರದ ಹೊರವಲಯದ ಖಾದ್ರಿಪುರದ ಬೆಟ್ಟದ ಬಳಿಯಿದ್ದ ಪಾಳುಬಿದ್ದ ಮನೆಯನ್ನೂ ಪರಿಶೀಲಿಸಿಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎನ್‌ಐಎ ಅಕಾರಿಗಳ ತಂಡವು ಮನೆಗೆ ಭೇಟಿ ನೀಡಿ ಪರಿಶೀಲಿಸಿದರು ಯಾವುದೇ ದಾಖಲೆಗಳು ಸಿಕ್ಕಿಲ್ಲ. ಆದರೆ, ಸ್ಥಳ ಪರಿಶೀಲನೆಯ ಕುರಿತು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.