ADVERTISEMENT

ಯುವ ಕಾಂಗ್ರೆಸ್‌ ಕಾರ್ಯಕರ್ತರ ಬಂಧನ

ತೈಲೋತ್ಪನ್ನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ: ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:31 IST
Last Updated 14 ಜೂನ್ 2021, 17:31 IST
ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕೋಲಾರದಲ್ಲಿ ಸೋಮವಾರ ಪೆಟ್ರೋಲ್‌ ಬಂಕ್‌ ಎದುರು ಪ್ರತಿಭಟನೆ ಮಾಡಿದರು
ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕೋಲಾರದಲ್ಲಿ ಸೋಮವಾರ ಪೆಟ್ರೋಲ್‌ ಬಂಕ್‌ ಎದುರು ಪ್ರತಿಭಟನೆ ಮಾಡಿದರು   

ಕೋಲಾರ: ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಇಲ್ಲಿ ಸೋಮವಾರ ನಚಿಕೇತನ ವಿದ್ಯಾರ್ಥಿನಿಲಯ ಮುಂಭಾಗದ ಪೆಟ್ರೋಲ್‌ ಬಂಕ್‌ ಎದುರು ಪ್ರತಿಭಟನೆ ಮಾಡಿದ ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಹಾಗೂ ಕಾರ್ಯಕರ್ತರನ್ನು ಗಲ್‌ಪೇಟೆ ಪೊಲೀಸರು ಬಂಧಿಸಿದರು.

ಪೂರ್ವಾನುಮತಿ ಪಡೆಯದೆ ಬೆಳಿಗ್ಗೆ ಪ್ರತಿಭಟನೆ ಮಾಡಿದ ಯುವ ಕಾಂಗ್ರೆಸ್‌ ಘಟಕದ ಸದಸ್ಯರು ರಸ್ತೆಯಲ್ಲೇ ಕ್ರಿಕೆಟ್‌ ಆಡಿ ಬ್ಯಾಟ್‌ ಹಿಡಿದು ‘ನಾಟ್‍ಔಟ್ 100’ ಎಂದು ಘೋಷಣೆ ಕೂಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಸಿಲಿಂಡರ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರು ಗತಿಯಲ್ಲೇ ಸಾಗಿದೆ. ಕೇಂದ್ರವು ಕೋವಿಡ್‌ ಸಂಕಷ್ಟದಲ್ಲಿರುವ ಜನಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ’ ಎಂದು ಮೊಹಮ್ಮದ್‌ ನಲಪಾಡ್‌ ಕಿಡಿಕಾರಿದರು.

ADVERTISEMENT

‘ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಬೇಳೆ ಕಾಳು, ಅಕ್ಕಿ, ಅಡುಗೆ ಎಣ್ಣೆಯಂತಹ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನ, ಕಾರ್ಮಿಕರು, ರೈತರು ತೊಂದರೆ ಅನುಭವಿಸುವಂತಾಗಿದೆ’ ಎಂದು ಆರೋಪಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೋವಿಡ್ ನಿಯಂತ್ರಣದಲ್ಲೂ ವಿಫಲವಾಗಿವೆ. ಅಗತ್ಯ ಬೆಲೆ ಏರಿಕೆ ತಡೆಯುವಲ್ಲೂ ವಿಫಲವಾಗಿದ್ದು, ಬಿಜೆಪಿಯ ದುರಾಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಪ್ರಧಾನಿ ಮೋದಿ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈಗೊಂಬೆಯಾಗಿರುವ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿಲ್ಲ’ ಎಂದು ಟೀಕಿಸಿದರು.

ಕಂಪನಿಗಳ ಲೂಟಿ: ‘ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ತೈಲೋತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತೈಲ ಕಂಪನಿಗಳು ಬಡ ಜನರ ಹಣ ಲೂಟಿ ಮಾಡುತ್ತಿವೆ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸದಿದ್ದರೆ ಮತ್ತಷ್ಟು ಕಷ್ಟದ ದಿನಗಳು ಎದುರಾಗುತ್ತವೆ. ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಬೇಕು. ತೈಲೋತ್ಪನ್ನ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ತೈಲೋತ್ಪನ್ನಗಳ ಮೇಲಿನ ಸೆಸ್ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹೋರಾಟಕ್ಕೆ ತಡೆಯೊಡ್ಡಿದ್ದರಿಂದ ಪರಸ್ಪರ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆ ಮಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಫ್ರಾನ್ಸಿಸ್‌ ಬೆನಿಟೋ ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.