ADVERTISEMENT

ಆಶ್ರಯ ಯೋಜನೆಯಡಿ ನಿವೇಶನ | ಸೆ.15ರೊಳಗೆ ಪೂರ್ಣ ದಾಖಲೆ ಸಲ್ಲಿಸಿ: ಕೆ.ವೈ.ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 7:13 IST
Last Updated 22 ಆಗಸ್ಟ್ 2025, 7:13 IST
ಮಾಲೂರು ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು
ಮಾಲೂರು ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು   

ಮಾಲೂರು: ಆಶ್ರಯ ಯೋಜನೆಯಡಿ ನಿವೇಶನ ಪಡೆಯಲು ಸಲ್ಲಿಕೆ ಮಾಡಿದ್ದ 1,369 ಅರ್ಜಿಗಳಲ್ಲಿ 689 ಮಂದಿ ಫಲಾನುಭವಿಗಳು ಪೂರ್ಣ ದಾಖಲೆ ಸಲ್ಲಿಸಿದ್ದು, ಉಳಿದ 474 ಮಂದಿ ಸೆ.15ರೊಳಗೆ ಪೂರ್ಣ ದಾಖಲೆ ನೀಡಿದರೆ ಅವರಿಗೂ ಸಹ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಅವರು ತಿಳಿಸಿದರು.

ನಗರಸಭೆ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 22 ವರ್ಷಗಳ ಹಿಂದೆ ಪುರಸಭೆಯಿಂದ ಆಶ್ರಯ ಯೋಜನೆಯಡಿ ನಿವೇಶನ ಪಡೆಯಲು 1,369 ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 780 ಮಂದಿ ₹35 ಸಾವಿರ ಪಾವತಿಸಿದ್ದರು. ನಿವೇಶನ ಹಂಚಿಕೆ ಮಾಡಿಲ್ಲ. ಪುರಸಭೆಯಲ್ಲಿ ಸಭೆ ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ₹35 ಸಾವಿರಕ್ಕೆ ಬಡ್ಡಿ ಸಮೇತ ಫಲಾನುಭವಿಗಳಿಗೆ ಹಿಂದಿರುಗಿಸುವ ಮೂಲಕ ಉಚಿತ ನಿವೇಶನ ನೀಡಲು ತೀರ್ಮಾನಿಸಲಾಗಿತ್ತು.

ನಿವೇಶನ ಹಂಚಿಕೆ ಮಾಡಲು ಭೂಮಿಯ ಕೊರತೆ ನೀಗಿಸಲು ಜಿಲ್ಲಾಡಳಿತದಿಂದ 27 ಎಕರೆ ಜಮೀನು ಮಂಜೂರಾತಿ ಪಡೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಸಹಕಾರ ಪಡೆದು ನಿವೇಶನದ ಹಕ್ಕು ಪತ್ರ ಹಾಗೂ ಮನೆ ಮಂಜೂರಾತಿ ಪತ್ರಗಳು ಮುಖ್ಯಮಂತ್ರಿಗಳಿಂದ ವಿತರಿಸಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

ಇನ್ನೂ 200 ನಿವೇಶನಗಳು ನಮ್ಮಲ್ಲಿ ಲಭ್ಯವಿದ್ದು 474 ಮಂದಿ ಅರ್ಜಿದಾರರು ದಾಖಲೆ ಸಲ್ಲಿಸಿದರೆ, ಅವರಿಗೂ ಸಹ 2ನೇ ಹಂತದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಸೆ.15ರೊಳಗೆ ಪೂರ್ಣ ದಾಖಲೆ ನೀಡಿದರೆ ಅಂದು ಲಾಟರಿ ಮೂಲಕ ನಿವೇಶನ ವಿತರಣೆ ಫಲಾನುಭವಿಗಳನ್ನು ಆಯ್ಕೆ ಪಟ್ಟಿಗೆ ಸೇರಿಸಲಾಗುವುದು. ನಂತರದ ದಿನಗಳಲ್ಲಿಯೂ ಸಹ ನೀಡಿದರೆ ಅವರನ್ನು ಎರಡನೇ ಹಂತದಲ್ಲಿ ಆಯ್ಕೆ ಮಾಡಲು ಸಭೆ ನಡೆಸಲಾಗುವುದು ಎಂದು ಹೇಳಿದರು.

ಪಟ್ಟಣದ ಇಂದಿರಾನಗರದ ಸಮೀಪ, ಕೆಎಲ್ಇ ಶಾಲೆ ಮತ್ತು ದೊಡ್ಡ ಕಡೂರು ಗ್ರಾಮದ ಬಳಿ ನಿವೇಶನ ಹಂಚಿಕೆ ಮಾಡಲಾಗುವುದು. ಇದೇ ರೀತಿ ತಾಲ್ಲೂಕಿನ 28 ಗ್ರಾಮಗಳಲ್ಲಿ ನಿವೇಶನ ರೈತ ಫಲಾನುಭವಿಗಳಿಗೆ ನಿವೇಶನ ನೀಡಲು ಈಗಾಗಲೇ ಗ್ರಾಮ ಹಾಗೂ ತಾಲ್ಲೂಕು ಪಂಚಾಯಿತಿ 14 ಸಾವಿರ ಫಲಾನುಭವಿಗಳನ್ನು ಗುರುತಿಸಿದೆ. ಅದಕ್ಕೆ 400 ಎಕರೆ ಜಮೀನಿನ ಅಗತ್ಯವಿದ್ದು, ತಹಶೀಲ್ದಾರ್ ಹಾಗೂ ಸರ್ವೆ ಇಲಾಖೆಯವರು ಭೂಮಿ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ನೀತಿ ನಿಯಮನುಸಾರ ನಿವೇಶನ ನೀಡಲಾಗುವುದು ಎಂದರು.

ವಿಜಯಲಕ್ಷ್ಮಿ, ವಿ.ಕೃಷ್ಣಪ್ಪ, ರಾಜಪ್ಪ, ಎಂ.ವಿ.ವೇಮನ, ಇಂತಿಯಾಜ್ ಖಾನ್, ಪದ್ಮಾವತಿ, ಮುರುಳಿಧರ್, ಅನಿತಾ ನಾಗರಾಜ್, ಶ್ರೀನಿವಾಸ್, ಭಾರತೀ ಶಂಕ್ರಪ್ಪ, ಎ.ಬಿ.ಪ್ರದೀಪ್ ಕುಮಾರ್, ದಿನೇಶ್ ಗೌಡ, ಜಾಕಿ ಮಂಜು, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರ ತಾಲ್ಲೂಕಿಗೆ ಆಗಮಿಸಿ ₹2500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಶಾಸಕ ಕೆ.ವೈ.ನಂಜೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.