ADVERTISEMENT

ಬಿಜಿಎಂಎಲ್ ಶಾಲಾ ಕಟ್ಟಡ ಕೆಡವಲು ಯತ್ನ

ಸೂಕ್ತ ರಕ್ಷಣೆ ಕೋರಿ ಪೊಲೀಸರಿಗೆ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:26 IST
Last Updated 4 ಡಿಸೆಂಬರ್ 2021, 2:26 IST

ಕೆಜಿಎಫ್‌: ಬಿಜಿಎಂಎಲ್‌ ಶಾಲೆಯ ಆಡಳಿತದಲ್ಲಿ ಹೊರಗಿನ ವ್ಯಕ್ತಿಗಳು ಹಸ್ತಕ್ಷೇಪ ಮಾಡುತ್ತಿದ್ದು, ಸೂಕ್ತ ರಕ್ಷಣೆ ನೀಡಬೇಕು ಎಂದು ಬಿಜಿಎಂಎಲ್‌ ಪ್ರೌಢಶಾಲೆಯ ಮುಖ್ಯಶಿಕ್ಷಕರು ಊರಿಗಾಂ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

ಬಿಜಿಎಂಎಲ್ ಮುಚ್ಚಿದ ನಂತರ ಬಿಜಿಎಂಎಲ್‌ ಶಿಕ್ಷಣ ಸಮಿತಿ ಅಸ್ತಿತ್ವ ಕಳೆದುಕೊಂಡಿತು. ಇದುಅನುದಾನಿತ ಶಾಲೆಯಾಗಿದೆ. ಇದರಿಂದ ಸರ್ಕಾರ ಸಂಬಳ ನೀಡುತ್ತಿದೆ. ಆದರೆ ಆಡಳಿತ ಮಂಡಳಿ ಮಾತ್ರ ಇಲ್ಲ. ಶಾಲೆಗೆ ಹಲವಾರು ದಾನಿಗಳು ಕೊಡುಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನೀಲ್ ಜೋಸೆಫ್‌, ವಿಜಯನ್‌ ಮತ್ತಿತರರು ಅಭಿವೃದ್ಧಿ ನೆಪದಲ್ಲಿ ಶಾಲೆಗೆ ಬರತೊಡಗಿದರು. ಶಾಲೆಯಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಿಧನ ಹೊಂದಿದ ಮೇಲೆ ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡುವಂತೆ ಬಿಜಿಎಂಎಲ್‌ ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ, ನೀಲ್ ಜೋಸೆಫ್ ಎಂಬುವರು ನಾನೇ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂದು ಶಾಲೆ ಸಿಬ್ಬಂದಿಗೆ ನೋಟಿಸ್ ನೀಡಲು ಶುರು ಮಾಡಿದರು. ಶಾಲೆಯ ಎಲ್ಲಾ ವ್ಯವಹಾರದಲ್ಲೂ ಹಸ್ತಕ್ಷೇಪ ಮಾಡಲು ಶುರು ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಗುರುವಾರ ಶಾಲೆಯೊಳಗೆ ಬಂದ 8–10 ಜನರು ಕಟ್ಟಡ ಕೆಡವಲು ಬಂದಿರುವುದಾಗಿ ತಿಳಿಸಿದರು. ಇದು ಬಿಜಿಎಂಎಲ್‌ ಆಸ್ತಿ. ಸಂಸ್ಥೆಯ ಅನುಮತಿ ಇಲ್ಲದೆ ಕಟ್ಟಡ ಒಡೆಯಲು ಅವಕಾಶ ನೀಡುವುದಿಲ್ಲ ಎಂದು ಶಾಲೆಯ ಸಿಬ್ಬಂದಿ ಹೇಳಿದ್ದಾರೆ. ಆಗ ನೀಲ್ ಜೋಸೆಫ್‌ ನಮ್ಮನ್ನು ಕಳಿಸಿದರು ಎಂದು ಶಾಲೆಯೊಳಗೆ ಬಂದಿದ್ದವರು ತಿಳಿಸಿದ್ದಾರೆ.

ಶಾಲೆಯ ಕಟ್ಟಡ ಕೆಡವಲು ಅನುಮತಿ ನೀಡದೆ ಇದ್ದರೆ ನೋಟಿಸ್ ಜಾರಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಶಾಲೆಯು ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಮುಖ್ಯ‌ಶಿಕ್ಷಕರು ಮತ್ತು ಸಿಬ್ಬಂದಿ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.