ADVERTISEMENT

ಕಾರ್ಮಿಕರ ವಿಭಜನೆಗೆ ಪ್ರಯತ್ನ

ಕೋಲಾರದಲ್ಲಿ ಕೆಎಸ್‌ಆರ್‌ಟಿಸಿ ಕಾರ್ಮಿಕರ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:28 IST
Last Updated 24 ನವೆಂಬರ್ 2022, 4:28 IST
ಕೋಲಾರದಲ್ಲಿ ಬುಧವಾರ ನಡೆದ ಕೆಎಸ್‌ಆರ್‌ಟಿಸಿ ಕಾರ್ಮಿಕರ ಜಾಗೃತಿ ಸಮಾವೇಶದಲ್ಲಿ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದರು
ಕೋಲಾರದಲ್ಲಿ ಬುಧವಾರ ನಡೆದ ಕೆಎಸ್‌ಆರ್‌ಟಿಸಿ ಕಾರ್ಮಿಕರ ಜಾಗೃತಿ ಸಮಾವೇಶದಲ್ಲಿ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದರು   

ಕೋಲಾರ: ‘ಕಾರ್ಮಿಕರು ಒಗ್ಗಟ್ಟಿನಿಂದ ಇದ್ದರೆ ವೇತನ ಕೇಳುತ್ತಾರೆಂದು ಅವರನ್ನು ವಿಭಜನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ, ಕಾರ್ಮಿಕರು ಎಚ್ಚೆತ್ತುಕೊಳ್ಳಬೇಕು’ ಎಂದು ಸಿಐಟಿಯು ಸಾರಿಗೆ ನೌಕರರ ಸಂಘದ ರಾಜ್ಯ ಮುಖಂಡ ಎಸ್.ಎಚ್ ಮಂಜುನಾಥ್ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಕೆಎಸ್‌ಆರ್‌ಟಿಸಿ ನಿಗಮದ ಅವಿಭಜಿತ ಕೋಲಾರ ಜಿಲ್ಲೆಯ ಕಾರ್ಮಿಕರ ಜಾಗೃತಿ ಸಮಾವೇಶದಲ್ಲಿ ಅವರು
ಮಾತನಾಡಿದರು.

‘ಕಾರ್ಮಿಕರಿಗೆ ವೇತನ ಹೆಚ್ಚಿಸುವ ಶಕ್ತಿ ನಮ್ಮ ಐಕ್ಯ ಹೋರಾಟ ಸಮಿತಿಗೆ ಇದೆ. ‌ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿ ದುಡಿಮೆಗೆ ತಕ್ಕ ವೇತನ ನೀಡುವ ಸರ್ಕಾರದ ಜವಾಬ್ದಾರಿ’ ಎಂದರು.

ADVERTISEMENT

‘ಸಾರಿಗೆ ನೌಕರರ ವೇತನ ಕುರಿತಂತೆ ಸರ್ಕಾರದೊಂದಿಗೆ ಕೆಲವರು ಏಜೆಂಟ್ ರೀತಿ ಶಾಮೀಲಾಗಿ ಅವೈಜ್ಞಾನಿಕ ವೇತನ ಪದ್ಧತಿ ಜಾರಿಗೆ ತಂದಿದ್ದಾರೆ. ಕಾನೂನು ಪರಿಣತರು, ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕರೊಂದಿಗೆ ಸರ್ಕಾರವೇ ಚರ್ಚೆ ನಡೆಸಲಿ. ಯಾವುದು ಅವೈಜ್ಞಾನಿಕ, ಯಾವುದು ವೈಜ್ಞಾನಿಕ ಎಂಬುದನ್ನು ಕಾನೂನು ಪ್ರಕಾರವೇ ಜಾರಿ ಮಾಡಲಿ’ ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ಮಾತನಾಡಿ, 'ಸಹಕಾರಿ ಸಂಸ್ಥೆಗಳೇ ದೇಶದ ಭವಿಷ್ಯ. ಅವುಗಳನ್ನು ಮಾರಾಟ ಮಾಡಲು
ಮುಂದಾಗಿದ್ದಾರೆ. ಹೋರಾಟದ ಹೆಸರಿನಲ್ಲಿ ಕಪ್ಪ ಕಾಣಿಕೆ ಪಡೆಯಲು ಸಾರಿಗೆ ನೌಕರರಿಗೆ ಸಂಬಂಧವಿಲ್ಲದ ವ್ಯಕ್ತಿಗಳು ಬಂದಿದ್ದರು. ಅವರು ಇವತ್ತು ಹೊರಗಿದ್ದು, ಸಾರಿಗೆ ನೌಕರರ ನ್ಯಾಯಯುತ 18 ಬೇಡಿಕೆ ಈಡೇರಿಸಲು ಜಂಟಿಯಾಗಿ ಹೋರಾಟವನ್ನು ರೂಪಿಸಿ ವಿಭಾಗವಾರು ಸಮಾವೇಶ ಆಯೋಜಿಸಲಾಗಿದೆ’
ಎಂದರು.

ವಿವಿಧ ಕಾರ್ಮಿಕ ಮುಖಂಡರಾದ ರೇವಪ್ಪ, ಜಯರಾಜ್ ಅರಸ್, ದೇವರಾಜ್, ವಿಜಯಕುಮಾರ್, ವೆಂಕಟರಾಮ್, ಮಲ್ಲಿಕಾರ್ಜುನ ಮೂರ್ತಿ, ರವಿಪ್ರಕಾಶ್, ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ಕೆ.ಆರ್ ತ್ಯಾಗರಾಜ್, ಚಂಬೆ ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.