ಕೋಲಾರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆ ಕೈಗೊಳ್ಳಲು ಜಿಲ್ಲೆಯಲ್ಲಿ ಮೊದಲನೆ ಹಂತವಾಗಿ ಜಿಯೋ ಟ್ಯಾಗಿಂಗ್ ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ ಸೆ.20 ರಿಂದ ಅ.7 ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಗಣತಿದಾರರನ್ನು ನೇಮಿಸಿ ಪಟ್ಟಿ ಅಂತಿಮಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಇಂಧನ ಇಲಾಖೆಯಿಂದ ಈಗಾಗಲೇ ಮನೆಗಳಿಗೆ ಜಿಯೋ ಟ್ಯಾಗ್ ಮಾಡಿ ಸ್ಟಿಕರ್ ಅಂಟಿಸಲಾಗಿದೆ. 150 ಮನೆಗಳಿಗೆ ಒಂದು ಬ್ಲಾಕ್ ಗುರುತಿಸಿ ರೂಟ್ ಮ್ಯಾಪ್ ಹಾಗೂ ಬ್ಲಾಕ್ ಮ್ಯಾಪ್ ಮಾಡುವ ಕಾರ್ಯ ಆರಂಭಿಸಲಾಗಿದ್ದು, ಈ ತಿಂಗಳ ಮೊದಲನೆ ವಾರದೊಳಗೆ ಟ್ಯಾಗಿಂಗ್ ಕಾರ್ಯ ಪೂರ್ಣಗೊಳಿಸಬೇಕು’ ಎಂದರು.
65 ಪ್ರಶ್ನಾವಳಿ ಇರಲಿದ್ದು, ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ ಅಭಿವೃದ್ಧಿಪಡಿಸಿರುವ ತಂತ್ರಾಂಶಗಳ ಮೂಲಕ ಸರ್ವೇ ಕಾರ್ಯ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಿ ಸಮರ್ಪಕವಾಗಿ ಸಮೀಕ್ಷಾ ಕಾರ್ಯ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಹೆಚ್ಚುವರಿ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರು, ಉಪವಿಭಾಗಾಧಿಕಾರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಸದಸ್ಯರಾಗಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಯು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿರುವ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿಯಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ಪುರಸಭೆ ಮುಖ್ಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯರಾಗಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಸಮೀಕ್ಷೆ ಕಾರ್ಯಕ್ಕಿಂತ ಮುನ್ನ ಆರ್‌ಆರ್ ನಂಬರ್ ಗುರುತಿಸುವ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕುಟುಂಬಗಳು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದರು.
ಇದರಿಂದ ಎರಡನೇ ಹಂತದಲ್ಲಿ ನಡೆಯುವ ಸಮೀಕ್ಷೆ ಕಾರ್ಯವನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಕಾರ್ಯಗತಗೊಳಿಸಲು ಅನುಕೂಲವಾಗಲಿದೆ. ಮೊದಲನೇ ಹಂತದ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ನಿರ್ವಹಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಉಪವಿಭಾಗಾಧಿಕಾರಿ ಡಾ. ಮೈತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್, ಜಿಲ್ಲಾ ಸಾಂಖ್ಯೆಕ ಅಧಿಕಾರಿ ರಮೇಶ್, ಎಲ್ಲಾ ತಾಲ್ಲೂಕಿನ ತಹಶೀಲ್ದಾರ್, ಇಒಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಮೊದಲನೇ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರತಿಯೊಂದು ಮನೆಯ ಆರ್‌ಆರ್ ನಂಬರಿಗೆ ಜಿಯೋ ಟ್ಯಾಗಿಂಗ್ ಅಳವಡಿಸುವ ಕಾರ್ಯ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕುಎಂ.ಆರ್.ರವಿ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ 3,33,348 ಕುಟುಂಬಗಳು:
ಜಿಲ್ಲೆಯಲ್ಲಿರುವ 3,33,348 ಕುಟುಂಬಗಳ ಮನೆಗಳ ಆರ್‌ಆರ್ ನಂಬರ್‌ಗೆ ಜಿಯೋ ಟ್ಯಾಗಿಂಗ್ ಮಾಡುವ ಮೂಲಕ ಶೇ 100ರಷ್ಟು ಪ್ರಗತಿ ಸಾಧಿಸಬೇಕು ಎಂದು ಎಂ.ಆರ್.ರವಿ ಹೇಳಿದರು. ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ನಿಯೋಜಿಸಬೇಕು. ಪ್ರತಿ 15 ರಿಂದ 20 ಗಣತಿದಾರರಿಗೆ ಒಬ್ಬರಂತೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಬಿಆರ್‌ಸಿ-ಸಿಆರ್‌ಸಿಗಳು ಮೇಲ್ವಿಚಾರಕರಾಗಿ ನಿಗಾ ವಹಿಸಬೇಕು. ಪ್ರತಿ 50 ಗಣತಿದಾರರಿಗೆ ಒಬ್ಬ ಮಾಸ್ಟರ್ ಟ್ರೇನರ್ ನಿಯೋಜನೆ ಮಾಡಬೇಕು. ಮಾಸ್ಟರ್ ಟ್ರೇನರ್ ಸಮೀಕ್ಷಾ ಕಾರ್ಯಗಳ ಕುರಿತು ಸಂಪೂರ್ಣ ಮಾಹಿತಿ ಹೊಂದಿರುವ ಮಾಸ್ಟರ್ ಟ್ರೇನರ್‌ಗಳನ್ನು ನಿಯೋಜಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.