ಶ್ರೀನಿವಾಸಪುರ: ತಾಲ್ಲೂಕಿನ ಚಲ್ದಿಗಾನಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದ ರಸ್ತೆ ಹದಗೆಟ್ಟಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗ್ರಾಮದಲ್ಲಿ 15 ಮನೆಗಳು ಇದ್ದು, 80ಕ್ಕೂ ಅಧಿಕ ಮಂದಿ ಇದ್ದಾರೆ. ಆದರೆ, ಹಲವಾರು ವರ್ಷಗಳಿಂದ ಸರಿಯಾದ ರಸ್ತೆ ಇಲ್ಲದೆ ಜನರು ಪರದಾಡುತ್ತಿದ್ದಾರೆ.
‘ಜನಪ್ರತಿನಿಧಿಗಳು ಕೇವಲ ಚುನಾವಣೆಯ ಸಮಯದಲ್ಲಿ ಈ ಭಾಗಕ್ಕೆ ಬಂದು ಚುನಾವಣೆಯ ನಂತರ ಸರಿಪಡಿಸುವುದಾಗಿ ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಮತ್ತೆ ಈ ಕಡೆ ತಲೆಯನ್ನೂ ಹಾಕುವುದಿಲ್ಲ’ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
‘ನಮ್ಮ ಗ್ರಾಮದ ಮೂಲಕ ಹಾದು ಹೋಗುವ ವಾಹನ ಸವಾರರ ಪರಿಸ್ಥಿತಿ ಹೇಳತೀರದು. ಹೇಳುವವರು, ಕೇಳುವವರು ಯಾರೂ ಇಲ್ಲ. ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಈ ಗ್ರಾಮಗಳ ರಸ್ತೆಯತ್ತ ಗಮನ ಹರಿಸಬೇಕು. ಈಚೆಗೆ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಹದಗೆಡುತ್ತಿವೆ. ಕೂಡಲೇ ಇಂಥ ರಸ್ತೆಗಳ ಬಗ್ಗೆ ಮಾಹಿತಿ ಪಡೆದು ಪಟ್ಟಿ ಮಾಡಿ ತ್ವರಿತಗತಿಯಲ್ಲಿ ದುರಸ್ತಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ರಸ್ತೆಯಲ್ಲಿ ಗುಂಡಿಗಳು ಹೆಚ್ಚಿದ್ದು, ಮಳೆಗಾಲ ಕಾರಣ ನೀರು ತುಂಬಿಕೊಂಡಿದೆ. ಎಲ್ಲಿ ಗುಂಡಿಗಳಿವೆ ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟ. ಇದರಿಂದ ವಾಹನಗಳ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಶಾಸಕರು ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರಸ್ತೆ ಸಮಸ್ಯೆ ಬಗೆಹರಿಸಲು ಸೂಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಗ್ರಾಮಸ್ಥರ ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ವೆಂಕಟೇಶಪ್ಪ, ಶಿವು, ಕೆಂಪಣ್ಣ, ಮುನಿಶಾಮಿ, ಬಾಬು, ನಾರಾಯಣಸ್ವಾಮಿ ಇದ್ದರು.
ಶ್ರೀನಿವಾಸಪುರ ತಾಲ್ಲೂಕಿನ ಗಂಗನಹಳ್ಳಿ ವಾಹನ ಸವಾರರು ಬಿದ್ದು ಗಾಯ ಬೇಗನೇ ದುರಸ್ತಿ ಮಾಡಲು ಗ್ರಾಮಸ್ಥರ ಒತ್ತಾಯ
ಚುನಾವಣೆಯಲ್ಲಿ ಗೆದ್ದ ಮೇಲೆ ರಸ್ತೆ ಸರಿ ಮಾಡಿಕೊಡುವುದಾಗಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದ್ದರು. ಆದರೆ. ಗೆದ್ದ ಮೇಲೆ ಇತ್ತ ಸುಳಿದಿಲ್ಲಮೋಹನ್ಬಾಬು ಗಂಗನಹಳ್ಳಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.