ADVERTISEMENT

ಬಿಗ್‌ಬಾಸ್‌ ಸ್ಪರ್ಧೆ ರದ್ದುಪಡಿಸಿ: ಒತ್ತಾಯ

ಸ್ಪರ್ಧಾಳು ಚೈತ್ರಾ ವಿರುದ್ಧ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಿಡಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 11:13 IST
Last Updated 9 ನವೆಂಬರ್ 2019, 11:13 IST

ಕೋಲಾರ: ‘ಬಿಗ್‌ಬಾಸ್ ಸ್ಪರ್ಧೆಯಲ್ಲಿ ಅಸ್ಪೃಶ್ಯತೆ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವ ಸ್ಪರ್ಧಾಳು ಚೈತ್ರಾ ಕೊಟ್ಟೂರು ಕ್ಷಮೆ ಯಾಚಿಸಬೇಕು ಹಾಗೂ ಆಯೋಜಕರು ಸ್ಪರ್ಧೆ ರದ್ದುಪಡಿಸಬೇಕು’ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷ ಆರ್.ಕೋದಂಡರಾಮ್ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚೈತ್ರಾ ಅವರು ಮತ್ತೊಬ್ಬ ಸ್ಪರ್ಧಾಳು ಹರೀಶ್‌ರಾಜ್ ಜತೆ ಸಂಭಾಷಣೆ ನಡೆಸುವಾಗ ಅಸ್ಪೃಶ್ಯತೆಯ ಸಂಬಂಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಶೋಷಿತ ಸಮುದಾಯಗಳಿಗೆ ನೋವಾಗಿದೆ’ ಎಂದರು.

‘ಚೈತ್ರಾ ಅವರು ಸಂಭಾಷಣೆ ಬಳಿಕ ಸ್ಪರ್ಧೆಯಲ್ಲೇ ಕ್ಷಮೆ ಯಾಚಿಸಿದ್ದಾರೆ. ಆದರೂ ಶೋಷಿತ ಸಮುದಾಯಗಳ ಆಗಿರುವ ನೋವು ಕಡಿಮೆಯಾಗಿಲ್ಲ. ಅವರ ವರ್ತನೆ ಖಂಡಿಸಿ ರಾಜ್ಯದಲ್ಲಿ ಹೋರಾಟ ನಡೆದಿವೆ. ಬಿಗ್‌ಬಾಸ್ ಸ್ಪರ್ಧೆ ರದ್ದುಪಡಿಸುವಂತೆ ಒತ್ತಾಯಿಸಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ಸ್ಪರ್ಧೆಯ ಸ್ಥಳದಲ್ಲಿ ನ.11ರಂದು ಪ್ರತಿಭಟನೆ ಮಾಡುತ್ತೇವೆ. ಹೋರಾಟಕ್ಕೆ ದಲಿತ ಸಂಘಟನೆಗಳು ಸಹಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

‘ಅಸ್ಪೃಶ್ಯತೆ ಅಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ. ಈ ಪರಿಜ್ಞಾನವಿಲ್ಲದೆ ಚೈತ್ರಾ ಮನಬಂದಂತೆ ಮಾತನಾಡಿ ಶೋಷಿತ ವರ್ಗದವರನ್ನು ಕೆರಳಿಸಿದ್ದಾರೆ. ಸ್ಪರ್ಧೆ ಆಯೋಜಕರು ಕಾರ್ಯಕ್ರಮ ಪ್ರಸಾರ ಮಾಡುವಾಗ ಕನಿಷ್ಠ ಆ ದೃಶ್ಯಾವಳಿಯನ್ನು ಎಡಿಟ್‌ ಮಾಡಬಹುದಿತ್ತು. ಆದರೆ, ಉದ್ದೇಶಪೂರ್ವಕವಾಗಿ ಆ ದೃಶ್ಯಾವಳಿಯನ್ನು ಪದೇ ಪದೇ ಪ್ರಸಾರ ಮಾಡಿದ್ದಾರೆ’ ಎಂದು ದೂರಿದರು.

‘ಈ ಹಿಂದೆ ನಟ ಸಿಹಿಕಹಿ ಚಂದ್ರು ಅವರು ವಡ್ಡರು ಎಂಬ ಪದ ಬಳಸಿ ಭೋವಿ ಸಮುದಾಯಕ್ಕೆ ಅಪಮಾನ ಎಸಗಿ ಬಳಿಕ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. ಈ ಬೆಳವಣಿಗೆಗಳನ್ನು ಗಮನಿಸಿದರೆ ಬಿಗ್‌ಬಾಸ್‌ ಸ್ಪರ್ಧೆ ಆಯೋಜಕರು ದಲಿತ, ಶೋಷಿತ ಸಮುದಾಯಗಳಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಮಾನಸಿಕ ಅಸ್ವಸ್ಥರನ್ನು ಸ್ಪರ್ಧೆಗೆ ಆಯ್ಕೆ ಮಾಡಿದ್ದಾರೆ ಎಂಬ ಭಾವನೆ ಮೂಡುತ್ತದೆ’ ಎಂದು ಕಿಡಿಕಾರಿದರು.

ದಲಿತ ಸಂಘಟನೆಗಳ ಮುಖಂಡರಾದ ವಿಜಯ್‌ಕುಮಾರ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಆನಂದ್‌ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಮನೋಜ್‌ಕುಮಾರ್, ಉಪಾಧ್ಯಕ್ಷ ಸೋಮಶೇಖರ್, ಸದಸ್ಯ ನಾರಾಯಣಪ್ಪ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.