ADVERTISEMENT

ಕೋಲಾರ: ‘ಬ್ಯಾಂಕೋ ಬ್ಲ್ಯೂ ರಿಬ್ಬನ್’ ಗೌರವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 16:06 IST
Last Updated 29 ಜನವರಿ 2021, 16:06 IST
ಕೋಲಾರ ಡಿಸಿಸಿ ಬ್ಯಾಂಕ್‌ ಕಟ್ಟಡದ ಹೊರ ನೋಟ.
ಕೋಲಾರ ಡಿಸಿಸಿ ಬ್ಯಾಂಕ್‌ ಕಟ್ಟಡದ ಹೊರ ನೋಟ.   

ಕೋಲಾರ: ದೇಶದ ಸಹಕಾರಿ ವಲಯದಲ್ಲಿನ ನಂ.1 ಬ್ಯಾಂಕ್ ಆಗಿರುವ ಅವಿಭಜಿತ ಕೋಲಾರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹಣಕಾಸು ಮತ್ತು ಆಡಳಿತ ನಿರ್ವಹಣೆ, ತಾಂತ್ರಿಕತೆ ಅಳವಡಿಕೆಯಲ್ಲಿನ ಸಾಧನೆಗಾಗಿ ಎವಿಐಇಎಸ್ ಪಬ್ಲಿಕೇಷನ್ ಸಂಸ್ಥೆ ನೀಡುವ ‘ಬ್ಯಾಂಕೋ ಬ್ಲ್ಯೂ ರಿಬ್ಬನ್-2020’ ಗೌರವಕ್ಕೆ ಪಾತ್ರವಾಗಿದೆ.

ಮಹಾರಾಷ್ಟ್ರದ ಎವಿಐಇಎಸ್ ಸಂಸ್ಥೆಯು ಇಡೀ ದೇಶದ ಎಲ್ಲಾ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಸಹಕಾರಿ ಬ್ಯಾಂಕ್‌ಗಳಿಂದ ಮಾಹಿತಿ ಪಡೆದು ಕೋಲಾರ ಡಿಸಿಸಿ ಬ್ಯಾಂಕನ್ನು ಪ್ರಥಮವೆಂದು ಆಯ್ಕೆ ಮಾಡಿದ್ದು, ಈ ಸಂಬಂಧ ಅಭಿನಂದನೆ ಸಲ್ಲಿಸಿ ಬ್ಯಾಂಕ್‌ಗೆ ಅಧ್ಯಕ್ಷರಿಗೆ ಪ್ರಶಂಸನಾ ಪತ್ರ ರವಾನಿಸಿದೆ.

2018-19 ಮತ್ತು 2019-20ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ಆರ್ಥಿಕ ಪ್ರಗತಿ, ಆಡಳಿತಾತ್ಮಕ ಸಾಧನೆ, ತಾಂತ್ರಿಕತೆ ಮತ್ತು ಗಣಕೀಕರಣ ಅಳವಡಿಕೆ ಸೇರಿದಂತೆ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಅಂಶಗಳನ್ನು ಆಧರಿಸಿ ಎವಿಐಇಎಸ್ ಸಂಸ್ಥೆಯು ಆಯ್ಕೆ ಪ್ರಕ್ರಿಯೆ ನಡೆಸಿದೆ. ಮೈಸೂರಿನಲ್ಲಿ ಮಾರ್ಚ್ ಮೊದಲ ವಾರ ನಡೆಯುವ ‘ಬ್ಯಾಂಕೋ ಬ್ಲ್ಯೂ ರಿಬ್ಬನ್-2020’ ಕಾರ್ಯಕ್ರಮದಲ್ಲಿ ಬ್ಯಾಂಕ್‌ಗೆ ಈ ಗೌರವ ನೀಡಲಾಗುತ್ತದೆ.

ADVERTISEMENT

ದಿವಾಳಿಯಾಗಿ ಪಡಿತರ ಮಾರಾಟಕ್ಕೆ ಸೀಮಿತವಾಗಿದ್ದ ಡಿಸಿಸಿ ಬ್ಯಾಂಕ್‌ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 200ಕ್ಕೂ ಹೆಚ್ಚು ಸೊಸೈಟಿಗಳಿಗೆ ಜೀವ ತುಂಬಿದ್ದು, ಸಾವಿರಾರು ಕೋಟಿ ಸಾಲ ವಿತರಿಸುವ ಶಕ್ತಿ ನೀಡಿದೆ. ವಾಣಿಜ್ಯ ಬ್ಯಾಂಕ್‌ಗಳನ್ನೂ ಮೀರಿ ಡಿಸಿಸಿ ಬ್ಯಾಂಕ್ ಶಾಖೆಗಳು ಆಧುನೀಕರಣಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.