ಬಂಧನ ( ಸಾಂಕೇತಿಕ ಚಿತ್ರ)
ಬಂಗಾರಪೇಟೆ (ಕೋಲಾರ): ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಗ್ರಾಮವೊಂದರಲ್ಲಿ ಪುತ್ರಿಯ ಮೇಲೆ ಅತ್ಯಾಚಾರವೆಸಗಿ, ಐದು ತಿಂಗಳ ಗರ್ಭಿಣಿ ಮಾಡಿರುವ ಪ್ರಕರಣದಲ್ಲಿ ವ್ಯಕ್ತಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ (55) ಮೂರು ಮಕ್ಕಳ ತಂದೆಯಾಗಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
‘11 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ ಈ ವ್ಯಕ್ತಿಯು ಆರು ತಿಂಗಳ ಹಿಂದೆ ತನ್ನ 20ರ ಹರೆಯದ ಪುತ್ರಿ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಮೂರ್ನಾಲ್ಕು ದಿನ ಅದು ಮುಂದುವರಿದಿದೆ. ನಂತರ ದಿನಗಳಲ್ಲಿ ಋತುಚಕ್ರದಲ್ಲಿ ವ್ಯತ್ಯಾಸವಾದ ಕಾರಣ ಆಕೆಯ ಅಕ್ಕ ಕೋಲಾರದ ಆಸ್ಪತ್ರೆಯೊಂದಕ್ಕೆ ಕರೆತಂದು ಪರೀಕ್ಷಿಸಿದ್ದಾರೆ. ಆಗ ಆಕೆ ಐದು ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಸಂತ್ರಸ್ತ ಯುವತಿಯನ್ನು ಕೋಲಾರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುತ್ರಿಯು ಮಂಗಳವಾರ (ಮಾರ್ಚ್ 11) ನೀಡಿದ ದೂರಿನ ಮೇರೆಗೆ ಕಾಮಸಮುದ್ರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.