ADVERTISEMENT

ಬಂಗಾರಪೇಟೆ | ಕೃಷ್ಣಾ ನೀರನ್ನು ಮುಷ್ಟ್ರಹಳ್ಳಿ ಕೆರೆಗೆ ಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:26 IST
Last Updated 4 ಅಕ್ಟೋಬರ್ 2025, 6:26 IST
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪೆಲ್ಲಿ ಬಳಿ ಕಾಲುವೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರು
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪೆಲ್ಲಿ ಬಳಿ ಕಾಲುವೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರು   

ಬಂಗಾರಪೇಟೆ: ಆಂಧ್ರಪ್ರದೇಶದ ಕುಪ್ಪಂಗೆ ಹರಿದ ಕೃಷ್ಣಾ ನದಿ ನೀರು ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆಗೆ ಹರಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಮುಷ್ಟ್ರಹಳ್ಳಿ‌ ಕೆರೆ ಈ ಭಾಗದ ದೊಡ್ಡ ಕೆರೆಯಾಗಿದ್ದು, ರೈತರಿಗೆ ಜೀವನಾಡಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಕೆರೆ ಬತ್ತಿ ಹೋಗಿ, ಅಂತರ್ಜಲ ಮಟ್ಟ ಕುಸಿದಿದೆ.

ತಾಲ್ಲೂಕಿನ ಗಡಿಯಿಂದ 2 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಗುಡಿಪೆಲ್ಲಿ ಗ್ರಾಮಕ್ಕೆ ಕೃಷ್ಣಾ ನದಿ ನೀರನ್ನು ಕಾಲುವೆ ಮೂಲಕ ಹರಿಸಲಾಗಿದೆ. ಕೃಷ್ಣಾ ನದಿ ಕುಡಿಯುವ ಯೋಜನೆಯಡಿ ನೀರನ್ನು ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆಗೆ ಹರಿಸಿದರೆ ಇಲ್ಲಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಇದರಿಂದ ಜನ, ಜಾನುವಾರುಗಳಿಗೆ ಸಹಾಯವಾಗಲಿದೆ.

ADVERTISEMENT

ಈ ಭಾಗದ ಜನರಿಗೆ ನೀರಿನ ಮೂಲವಿಲ್ಲದೆ ಕೊಳವೆ ಬಾವಿಯನ್ನೇ ಅವಲಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹಾಗಾಗಿ ನದಿ ತಿರುವು ಮಾಡುವ ಮೂಲಕ ಈ ಭಾಗದ ಜನತೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು ಎಂಬುದು ಈ ಭಾಗದವರ ಒತ್ತಾಯವಾಗಿದೆ.

ಕೃಷ್ಣಾ ನದಿಯ ನೀರನ್ನು ಈಗಾಗಲೇ ಶಾಂತಿಪುರಂ ಮತ್ತು ಗುಡಿಪೆಲ್ಲಿ ಮಂಡಲಂ, ಕುಪ್ಪಂ ಮಂಡಲಂ ವ್ಯಾಪ್ತಿಯ ಸಣ್ಣ ಕೆರೆಗಳಿಗೆ ಹರಿಸಲಾಗಿದೆ. ಹಾಗಾಗಿ ಕೃಷಾ ನದಿ ನೀರನ್ನು ಮುಷ್ಟ್ರಹಳ್ಳಿ ಕೆರೆಗೆ ಹರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಗ್ರಾಮದವರೆಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಅದೇ ರೀತಿ ಕೃಷ್ಣಾ ನದಿ ನೀರನ್ನು ಗುಡಿವಂಕ ಹಳ್ಳದ ಮುಖಾಂತರ ಮುಷ್ಟ್ರಹಳ್ಳಿ ಕೆರೆ ಹರಿಸಿದರೆ ರೈತರ ಸಂಕಷ್ಟಗಳು ದೂರವಾಗಲಿದೆ.
ಮಂಜುಳಾ ಎಸ್.ಕೆ.ಜಯಣ್ಣ ಅಧ್ಯಕ್ಷೆ ದೋಣಿಮಡಗು ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.