ADVERTISEMENT

ಬಂಗಾರಪೇಟೆ: ಶೀಘ್ರ ಪುರಸಭೆ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:07 IST
Last Updated 31 ಮಾರ್ಚ್ 2022, 4:07 IST
ಬಂಗಾರಪೇಟೆ ಪಿಎಲ್‌ಡಿ ಬ್ಯಾಂಕ್ ಕಟ್ಟಡದಲ್ಲಿ ಬುಧವಾರ ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಜರಿದ್ದರು
ಬಂಗಾರಪೇಟೆ ಪಿಎಲ್‌ಡಿ ಬ್ಯಾಂಕ್ ಕಟ್ಟಡದಲ್ಲಿ ಬುಧವಾರ ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಜರಿದ್ದರು   

ಬಂಗಾರಪೇಟೆ: ‘ಏಪ್ರಿಲ್ ಎರಡನೇ ವಾರದಲ್ಲಿ ಪಟ್ಟಣದ ನೂತನ ಪುರಸಭೆ ಕಟ್ಟಡದ ಉದ್ಘಾಟನೆ ನೆರವೇರಲಿದೆ’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ನಡೆದ ಪುರಸಭೆಯ 2022-23ನೇ ಸಾಲಿನ ಸಾಮಾನ್ಯ ಸಭೆ ಮತ್ತು ಆಯವ್ಯಯ ಸಭೆಯಲ್ಲಿ ಅವರು ಮಾತನಾಡಿದರು.

ಪುರಸಭೆ ಕಟ್ಟಡದ ಉದ್ಘಾಟನೆ ಬಗ್ಗೆ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್‌ ಹಾಗೂ ಉಸ್ತುವಾರಿ ಸಚಿವ ಮುನಿರತ್ನ ಅವರ ಬಳಿ ಈಗಾಗಲೇ ಚರ್ಚಿಸಲಾಗಿದ್ದು, ಸಮ್ಮತಿಸಿದ್ದಾರೆ ಎಂದರು.

ADVERTISEMENT

ಪುರಸಭಾ ವ್ಯಾಪ್ತಿಯಲ್ಲಿ ಗುರುತಿಸಿ ರುವ 210 ಅಂಗಡಿಗಳಿಗೆ ಟ್ರೇಡ್ ಲೈಸನ್ಸ್ ನೀಡಿಕೆ, ಪುರಸಭಾ ವ್ಯಾಪ್ತಿಯ ಹಿಂದೂ ಸ್ಮಶಾನವನ್ನು ಶುಚಿತ್ವಗೊಳಿಸಿ ಕಾಂಪೌಂಡ್ ಗೋಡೆ ನಿರ್ಮಾಣ, ವಿಜಯನಗರದ ಹೌಸಿಂಗ್ ಬೋರ್ಡ್ ಕಾಲೊನಿಯಿಂದ ಸಾಂದೀಪನಿ ಶಾಲೆವರೆಗಿನ ರಸ್ತೆಗೆ ಡಾ.ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಲು ಸಭೆ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.

ಗುಡಿಸಲು ವಾಸಿಗಳಿಗೆ ಪಟ್ಟಣದ ದೇಶಿಹಳ್ಳಿಯ ಸರ್ವೆ ನಂಬರ್ 103ರಲ್ಲಿ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಿ, ಪಟ್ಟಣವನ್ನು ಗುಡಿಸಲು ಮುಕ್ತ ಪ್ರದೇಶವನ್ನಾಗಿ ಮಾಡಬೇಕು. ಪುರಸಭಾ ವ್ಯಾಪ್ತಿಯ ಸ್ವತ್ತುಗಳಿಗೆ ಸರ್ಕಾರದ ಆದೇಶದಂತೆ ಶೇ 3ರಷ್ಟು ಏರಿಕೆ ಮಾಡಲು ನಿರ್ಧರಿಸಲಾಯಿತು ಎಂದರು.

ಘನತ್ಯಾಜ್ಯ ನಿರ್ವಹಣೆಗೆ ಆಟೊ ಟಿಪ್ಪರ್, ವಾಹನ ಚಾಲಕರು, ಮತ್ತು ಘನತ್ಯಾಜ್ಯ ಘಟಕದಲ್ಲಿ ಮಿಷನ್ ಆಪ ರೇಟರ್, ಕಾವಲುಗಾರರು, ಸೂಪರ್ ವೈಸರ್ ಹಾಗೂ ಸಹಾಯಕರನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಇ-ಟೆಂಡರ್ ಕರೆಯಲು ನಿರ್ಣಯ ಕೈಗೊಂಡಿದೆ ಎಂದರು.

ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾಕರ್ ₹ 38.21 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು. ಎಲ್ಲಾ ಮೂಲಗಳಿಂದ ₹ 51.88 ಕೋಟಿ ಆದಾಯ ನಿರೀಕ್ಷಿಸಿದ್ದು, ಪುರಸಭೆ ಬಸ್ ನಿಲ್ದಾಣ, ಒಳಾಂಗಣ ಕ್ರೀಡಾಂಗಣ, ಶ್ರೀರಾಮ ದೇವಸ್ಥಾನದ ಬಳಿ ಇರುವ ಕಟ್ಟಡ ಕಾಮಗಾರಿಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ಪರ್ಜಾನ ಸುಹೇಲ್, ಮುಖ್ಯಾಧಿಕಾರಿ ಯಶವಂತ್ ಕುಮಾರ್, ಉಪಾಧ್ಯಕ್ಷೆ ರತ್ನಮ್ಮ ತಿಮ್ಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.