
ಬಂಗಾರಪೇಟೆ: ನಗರದ ರಸ್ತೆ ವಿಸ್ತರಣೆ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು, ಮಾಜಿ ಸಂಸದ ಎಸ್.ಮುನಿಸ್ವಾಮಿ ಮತ್ತು ಅವರ ಬೆಂಬಲಿಗರ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮಾಜಿ ಪುರಸಭೆ ಅಧ್ಯಕ್ಷ ಅಣ್ಣಾದೊರೈ ಮಾತನಾಡಿ, ಕೇವಲ ನಾಲ್ಕೈದು ಮುಸ್ಲಿಮರು ಮಾಡಿಕೊಂಡಿರುವ ಒತ್ತುವರಿಯನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ರಸ್ತೆ ಒತ್ತುವರಿ ಮಾಡಿಕೊಂಡು ಲೈಸೆನ್ಸ್ ಇಲ್ಲದೆ ನಡೆಸುತ್ತಿರುವ ಚಿಕನ್ ಮತ್ತು ಕಬಾಬ್ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
1953ರಲ್ಲೇ ಜಿಲ್ಲಾಧಿಕಾರಿ ಅನುಮತಿಯೊಂದಿಗೆ ಹರಾಜು ಮೂಲಕ ಈ ಜಮೀನನ್ನು ಸುಬ್ಬಯ್ಯಶೆಟ್ಟಿ ಎಂಬುವವರಿಗೆ ಮಾರಾಟ ಮಾಡಲಾಗಿತ್ತು. ಕಳೆದ 72 ವರ್ಷಗಳಿಂದ ಈ ಜಮೀನು ಬಳಕೆಯಲ್ಲಿದೆ. ಈಗ ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿ ಅದನ್ನು ಖರೀದಿ ಮಾಡಿರುವುದರಿಂದಲೇ ಇದನ್ನು 'ಅಕ್ರಮ' ಎಂದು ಕರೆಯುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖಂಡ ಸುಹೇಲ್ ಮಾತನಾಡಿ, ಮಾಜಿ ಸಂಸದ ಮುನಿಸ್ವಾಮಿ ಅವರು ಮುಸ್ಲಿಂ ಸಮುದಾಯದ ಬಗ್ಗೆ ತೋರುತ್ತಿರುವ ಕಾಳಜಿ ಕೇವಲ ಮೊಸಳೆ ಕಣ್ಣೀರು. ಕೋಲಾರದ ಕ್ಲಾಕ್ ಟವರ್ ಮತ್ತು ಮುಳಬಾಗಿಲಿನಲ್ಲಿ ಅವರು ಸಮುದಾಯಕ್ಕೆ ನೀಡಿದ ತೊಂದರೆ ಇಡೀ ರಾಜ್ಯಕ್ಕೆ ತಿಳಿದಿದೆ. ಆದರೆ, ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಸಮುದಾಯದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಎಂ.ಮುನಿರಾಜು ಮಾತನಾಡಿ, ದೇಶಿಹಳ್ಳಿ ಗ್ರಾಮದ ಸರ್ವೆ ನಂ.115ರ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಲೇಔಟ್ ಮಾಡಿ ಮಾರಾಟ ಮಾಡಲಾಗಿದೆ. ಅನಿಗಾನಹಳ್ಳಿ ಸರ್ವೆ ನಂ 30 ರಲ್ಲಿ ಅಕ್ರಮವಾಗಿ ಜಮೀನು ಮಂಜೂರು ಮಾಡಿಸಿಕೊಳ್ಳಲಾಗಿದೆ. ಮುಗಿಲಬೆಲೆ ಸರ್ವೆ ನಂ72ರಲ್ಲಿ ಮುನಿಸ್ವಾಮಿ ಅವರ ಜೊತೆಗಿರುವ ನಾಯಕರೇ ಅನ್ಯಾಯ ಎಸಗಿದ್ದಾರೆ. ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಚ್.ಕೆ ನಾರಾಯಣಸ್ವಾಮಿ ಮಾತನಾಡಿ, ಶಾಸಕರು ಅಕ್ರಮ ಎಸಗಿದ್ದರೆ ಮುನಿಸ್ವಾಮಿ ದಾಖಲೆ ಬಿಡುಗಡೆ ಮಾಡಲಿ ಎಂದರು.
ಪುರಸಭೆ ಅಧ್ಯಕ್ಷ ಗೋವಿಂದ, ಸದಸ್ಯ ವೆಂಕಟೇಶ್, ಮುಖಂಡರಾದ ಪಾರ್ಥಸಾರಥಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಹದೇವ್, ಅರುಣಾಚಲಂ ಮಣಿ, ಕುಂಬಾರಪಾಳ್ಯ ಮಂಜುನಾಥ, ಸಾದಿಕ್, ಯುವರಾಜ್ ಶಫಿ, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.