ADVERTISEMENT

ಆರೋಗ್ಯ, ಶಿಕ್ಷಣ ಒಂದೇ ಬಂಡಿಯ ಚಕ್ರಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 11:32 IST
Last Updated 13 ಮಾರ್ಚ್ 2020, 11:32 IST
ಬಂಗಾರಪೇಟೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಡಿಡಿಪಿಐ ಕೆ.ರತ್ನಯ್ಯ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ಮಾತನಾಡಿದರು
ಬಂಗಾರಪೇಟೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಡಿಡಿಪಿಐ ಕೆ.ರತ್ನಯ್ಯ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ಮಾತನಾಡಿದರು   

ಬಂಗಾರಪೇಟೆ: ಆರೋಗ್ಯ ಮತ್ತು ಶಿಕ್ಷಣ ಒಂದೇ ಬಂಡಿಯ ಎರಡು ಚಕ್ರಗಳಿದ್ದಂತೆ. ಪರೀಕ್ಷಾ ಸಂದರ್ಭ ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ತಮ ತಯಾರಿ ನಡೆಸಬೇಕು. ಹಾಗೆಯೇ ಉತ್ತಮ ಆರೋಗ್ಯ ಕೂಡ ಕಾಪಾಡಿ ಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ತಯಾರಿ ಹೇಗೆ ಇರಬೇಕು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.

ಮಕ್ಕಳು ಹೆಚ್ಚು ಒತ್ತಡ, ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆಯಬೇಕು. ಹೆಚ್ಚು ಸಮಯವನ್ನು ಇತರ ಕೆಲಸಗಳಿಗೆ ವ್ಯಯ ಮಾಡುವುದು ಬೇಡ. ವೇಳಾ ಪಟ್ಟಿ ಹಾಕಿಕೊಂಡು ಎಲ್ಲ ವಿಷಯಗಳಿಗೆ ಆದ್ಯತೆ ನೀಡಬೇಕು ಎಂದರು.

ADVERTISEMENT

ಪ್ರಶ್ನೆ ಪತ್ರಿಕೆಯಲ್ಲಿ ಒಂದೆರಡು ಕಠಿಣ ಪ್ರಶ್ನೆಗಳನ್ನು ಕಂಡ ತಕ್ಷಣ ವಿಚಲಿತರಾಗುವುದು ಬೇಡ. ಮೊದಲಿಗೆ ಸುಲಭ ಪ್ರಶ್ನೆಗಳನ್ನು ಗುರುತಿಸಿ ಉತ್ತರಿಸಬೇಕು. ಕಠಿಣ ಪ್ರಶ್ನೆಗಳಿಗೆ ನಿಧಾನವಾಗಿ ಯೋಚಿಸಿ ಉತ್ತರಿಸುವ ಕಲೆ ರೂಢಿಸಿಕೊಳ್ಳಬೇಕು ಎಂದರು.

ಮಕ್ಕಳು ಆದಷ್ಟೂ ದೂರದರ್ಶನ, ಮೊಬೈಲ್ನಿಂದ ದೂರ ಇರುವುದು ಒಳಿತು. ಯಾವುದೇ ವಿಷಯದಲ್ಲಿ ಸಂದೇಹಗಳಿದ್ದಲ್ಲಿ ಶಿಕ್ಷಕರ ಬಳಿ ಸ್ಪಷ್ಟೀಕರಣ ಪಡೆದು ಪರೀಕ್ಷೆಯಲ್ಲಿ ನಿಖರ ಉತ್ತರಗಳನ್ನು ಬರೆಯಬೇಕು ಎಂದರು.

ಮಿತ ಹಾಗೂ ಮನೆ ಆಹಾರ ಒಳ್ಳೆಯದು. ಹೆಚ್ಚು ಎಣ್ಣೆ ಮತ್ತು ಮಸಾಲೆಯಿಂದ ಕೂಡಿದ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ನಿದ್ದೆ ಕೆಡುವುದು ಬೇಡ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ.ಕೆಂಪಯ್ಯ, ಉಪ ಪ್ರಾಂಶುಪಾಲ ಶಂಕರಯ್ಯ, ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಕೃಷ್ಣಪ್ಪ, ವಾಜಿದ್ ಖಾನ್, ಆರ್.ಶ್ರೀನಿವಾಸನ್, ಸಿಆರ್‌ಪಿ ಅಜ್ಮಲ್ ಪಾಷಾ, ಟಿ.ರವಿಕುಮಾರ್, ಬಸವಂತ್, ಸೈಯದ್ ಅಸ್ಗರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.