ADVERTISEMENT

ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ

ಬಂಗಾರಪೇಟೆ ತಾಲ್ಲೂಕಿನಲ್ಲಿ ಹಲವು ಶಾಲೆಗಳು ಮುಚ್ಚುವ ಭೀತಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 5:20 IST
Last Updated 27 ಜೂನ್ 2025, 5:20 IST
ಬಂಗಾರಪೇಟೆ ತಾಲ್ಲೂಕಿನ ಕುಂದರಸನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಬಂಗಾರಪೇಟೆ ತಾಲ್ಲೂಕಿನ ಕುಂದರಸನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ಬಂಗಾರಪೇಟೆ: ಖಾಸಗಿ ಶಾಲೆಗಳ ಹೆಚ್ಚಳ ಮತ್ತು ಖಾಸಗಿ ಶಾಲೆಗಳ ಮೇಲಿನ ಪೋಷಕರ ವ್ಯಾಮೋಹದ ಕಾರಣದಿಂದಾಗಿ ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿ ಎದುರಿಸುತ್ತಿವೆ. 

ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದರಿಂದಾಗಿ ಹಲವು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.

ತಾಲ್ಲೂಕಿನಾದ್ಯಂತ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಪೋಷಕರು ಆಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಹಿನ್ನಡೆಯಾಗಿದೆ. 

ADVERTISEMENT

ಆಂಗ್ಲಭಾಷೆ ವ್ಯಾಮೋಹ: ಆಂಗ್ಲಭಾಷಾ ವ್ಯಾಮೋಹ ಹೊಂದಿರುವ ಬಹುತೇಕ ಪೋಷಕರು ಮತ್ತು ಆರ್ಥಿಕವಾಗಿ ಸುಧಾರಣೆ ಹೊಂದಿದವರು, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ. ಜೊತೆಗೆ ಕೆಲವರು ತಮ್ಮ ಕುಟುಂಬ ಸಹಿತರಾಗಿ ನಗರ ಪ್ರದೇಶಗಳತ್ತ ಮುಖ ಮಾಡುತ್ತಿರುವ ಕಾರಣ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಹೇಳುತ್ತಾರೆ. 

ಸರ್ಕಾರಿ ಶಾಲೆಗಳಲ್ಲಿ ಅಹ್ಲಾದಕರ ವಾತಾವರಣ, ಉತ್ತಮ ಕೊಠಡಿಗಳು, ಭೌತಿಕ ಪರಿಸರ ಹಾಗೂ ಮೂಲಸೌಲಭ್ಯಗಳ ಕೊರತೆಗಳಿವೆ. ಆಧುನಿಕ ಯುಗಕ್ಕೆ ಅಗತ್ಯವಾದ ಶೈಕ್ಷಣಿಕ ಪರಿಕರಗಳು, ಶಿಕ್ಷಕರ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿರುವುದಾಗಿ ಪೋಷಕರು ಹೇಳುತ್ತಾರೆ. 

ಇದರ ಪರಿಣಾಮ ಪ್ರತಿ ವರ್ಷವೂ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದ್ದರೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. 

ತಾಲ್ಲೂಕಿನಾದ್ಯಂತ 2023–24ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 6,605, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3,963, ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ಒಟ್ಟಾರೆ 3,112 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಮೂಲಕ ಒಟ್ಟಾರೆ 13,680 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರು. 

2024–25ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 6,020, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3,656, ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ 3,042 ಸೇರಿದಂತೆ ಒಟ್ಟಾರೆ 12,718 ವಿದ್ಯಾರ್ಥಿಗಳಿದ್ದರು. 2025–26ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4,345, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4,386, ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ 1,623 ಸೇರಿದಂತೆ ಒಟ್ಟಾರೆ ಸರ್ಕಾರಿ ಶಾಲೆಗಳಲ್ಲಿ 9,551 ವಿದ್ಯಾರ್ಥಿಗಳು ದಾಖಲಾಗಿದ್ದರು ಎಂಬುದಾಗಿ ಅಂಕಿಅಂಶಗಳು ತಿಳಿಸುತ್ತವೆ.

4 ವರ್ಷಗಳಲ್ಲಿ 62 ಶಾಲೆಗಳು ಬಂದ್

ಮಕ್ಕಳ ಕೊರತೆಯಿಂದ ಮೂರು ವರ್ಷಗಳಲ್ಲಿ ಆರು ಶಾಲೆಗಳನ್ನು ಮುಚ್ಚಲಾಗಿದೆ. ಹಲವು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯದ ಕೊರತೆ ಗುಣಮಟ್ಟದ ಶಿಕ್ಷಣ ಗ್ರಂಥಾಲಯ ಆಟದ ಮೈದಾನ ಒಳಗೊಂಡಂತೆ ಹಲವು ಸೌಲಭ್ಯಗಳು ಇಲ್ಲ. ಜೊತೆಗೆ ಶಿಕ್ಷಕರ ಕೊರತೆಯೂ ಇದೆ. ಇದರಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ 62 ಶಾಲೆಗಳು ಬಾಗಿಲು ಹಾಕಿವೆ. ಕೆಲವು ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. 

ವಸತಿ ಶಾಲೆಗಳ ಮೇಲೆ ಒಲವು

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಡಿ ಇರುವ ವಸತಿ ಶಾಲೆಗಳಲ್ಲಿ ಪ್ರವೇಶಾತಿ ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಾಲ್ಲೂಕಿನಲ್ಲಿರುವ ವಸತಿ ಶಾಲೆಗಳು ಪ್ರತಿ ವರ್ಷ ಭರ್ತಿಯಾಗುತ್ತಿವೆ. ಬಾಲಕರಿಗಿಂತ ಬಾಲಕಿಯರೇ ಹೆಚ್ಚಾಗಿ ಪ್ರವೇಶ ಪಡೆಯುತ್ತಿದ್ದಾರೆ. ಇದೂ ಸಹ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ.  ಶಾಲೆಯಲ್ಲಿ ಒಬ್ಬರು ಇಬ್ಬರು ವಿದ್ಯಾರ್ಥಿಗಳಿದ್ದರೆ ಅವರು ಕಲಿಯುವುದು ಹೇಗೆ? ಮಕ್ಕಳ ಒಡನಾಟ ಇರುವುದಿಲ್ಲ. ಗುಂಪು ಚಟುವಟಿಕೆಗಳು ಕ್ರೀಡಾ ಚಟುವಟಿಕೆಗಳು ಇಲ್ಲ. ಶೈಕ್ಷಣಿಕ ವಾತಾವರಣವೇ ಇಲ್ಲ. ಹೀಗಾಗಿ ಬೇರೆ ಶಾಲೆಗೆ ಸೇರಿಸುತ್ತೇವೆ. ವರ್ಗಾವಣೆ ಪತ್ರ ನೀಡುವಂತೆ ಪೋಷಕರು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಒತ್ತಾಯಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.