ADVERTISEMENT

ಬಂಗಾರಪೇಟೆ | 'ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ'

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:22 IST
Last Updated 10 ಸೆಪ್ಟೆಂಬರ್ 2025, 4:22 IST
ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಬಂಗಾರಪೇಟೆ ಪಟ್ಟಣದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣ ಮತ್ತು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಶಿಕ್ಷಕರಿಂದ ಪುಷ್ಪಾರ್ಚನೆ
ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಬಂಗಾರಪೇಟೆ ಪಟ್ಟಣದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣ ಮತ್ತು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಶಿಕ್ಷಕರಿಂದ ಪುಷ್ಪಾರ್ಚನೆ   

ಬಂಗಾರಪೇಟೆ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆಯನ್ನು  ಮಂಗಳವಾರ ಇಲ್ಲಿ ಹಮ್ಮಿಕೊಳ್ಳಲಾಯಿತು. 

ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ‘ಸಾವಿತ್ರಿಬಾಯಿ ಫುಲೆ ಅವರು ದೇಶದ ಮೊದಲ ಶಿಕ್ಷಕಿಯಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ಈ ಮೂಲಕ ಅವರು ಮಹಿಳೆಯರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ’ ಎಂದು ಪ್ರತಿಪಾದಿಸಿದರು. 

ತಾಲ್ಲೂಕಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರು ಕೆಎಎಸ್, ಐಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇದೆ. ಹೀಗಾಗಿ, ಅವರಿಗೆ ಅನುಕೂಲವಾಗುವಂತೆ ಪಟ್ಟಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. 

ADVERTISEMENT

ಶಿಕ್ಷಕರು ಮಕ್ಕಳಿಗೆ ಜ್ಙಾನ ತುಂಬಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಲ್ಪಿಗಳು. ಅವರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ತಾಲ್ಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಶಿಕ್ಷಕರು ಗ್ರಾಮೀಣ ಮಕ್ಕಳನ್ನು ತಮ್ಮ ಮಕ್ಕಳೆಂದು ತಿಳಿದು ಅವರಲ್ಲಿ ಆತ್ಮವಿಶ್ವಾಸ ತುಂಬಿ ಕೌಶಲ್ಯಗಳನ್ನು ವೃದ್ಧಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು. ಈ ಮೂಲಕ ಫಲಿತಾಂಶ ಹೆಚ್ಚಿಸಲು ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಹೇಳಿದರು. 

ಉತ್ತಮ ಶಿಕ್ಷಕರನ್ನು ಹಾಗೂ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಗೋವಿಂದ, ಕೆ. ಚಂದ್ರಾರೆಡ್ಡಿ, ತಹಶೀಲ್ದಾರ್ ಗ್ರೇಡ್ 2 ಜಿ.ಎಸ್. ಗಾಯತ್ರಿ, ಇಒ ರವಿಕುಮಾರ್, ಶಶಿಕಳ, ಸಿ. ಅಪ್ಪಯ್ಯ ಗೌಡ, ಆಂಜನೇಯಗೌಡ, ರವಿ, ಎಲ್. ರಾಮಕೃಷ್ಣಪ್ಪ, ಮಂಜುನಾಥ, ಪ್ರೇಮಲತಾ, ಆರ್. ಅಶ್ವಥ್, ಯುವರಾಜ್, ಎಲ್. ರಾಜಪ್ಪ, ಎಚ್.ಎಲ್ ಆನಂದ್, ಮುಕ್ತಿಯಾರ್, ಸುಜಾತಮ್ಮ, ಕೆ.ಜಿ. ಶ್ರೀನಿವಾಸ್, ಸಂಜೀವಪ್ಪ, ದೇವರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.