ADVERTISEMENT

ಬಂಗಾರಪೇಟೆ | ಜೆಜೆಎಂಗೆ ಕಳಪೆ ಸಾಮಗ್ರಿ: ಜನರ ಆಕ್ರೋಶ

ಜೆಜೆಎಂ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಮಧ್ಯೆ ತೆಗೆದಿರುವ ಗುಂಡಿಗಳಿಂದ ರಸ್ತೆ ರಚನೆಗೆ ಹಾನಿಯಾಗಿದೆ. ನಾಗರಾಜ್, ಸಕ್ಕನಹಳ್ಳಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 7:39 IST
Last Updated 15 ಡಿಸೆಂಬರ್ 2025, 7:39 IST
   

ಬಂಗಾರಪೇಟೆ: ಮನೆ ಮನೆಗೂಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದ್ದು, ಅದಕ್ಕೆ ಬಳಸಿರುವ ಸಾಮಾಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಜೊತೆಗೆ ಪೈಪ್‌ಲೈನ್‌ ಅಳವಡಿಕೆಗೆ ತೋಡಿರುವ ಗುಂಡಿಗಳು ಮುಚ್ಚದೆ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಜೆಜೆಎಂ ಮಿಷನ್ ಯೋಜನೆಯಲ್ಲಿ ಅಳವಡಿಸಿರುವ ಪೈಪ್‌ ಕನಿಷ್ಠ 35 ವರ್ಷ ಬಾಳಿಕೆ ಬರಬೇಕು. ಆದರೆ, ಅನೇಕ ಕಡೆ ಎರಡ್ಮೂರು ವರ್ಷಗಳಲ್ಲೇ ನಾಶವಾಗುವಂತಾಗಿವೆ.

ಮಾರ್ಗಸೂಚಿ ಪ್ರಕಾರ ಪೈಪ್‌ ಅಳವಡಿಕೆಗೆ ಮೂರು ಆಡಿ ಅಳ ಕಾಲುವೆ ತೆಗೆಯಬೇಕು. ಆದರೆ, ಕೆಲವು ಕಡೆ 1.5 ಅಡಿ ಆಳದಲ್ಲೇ ಪೈಪ್‌ ಹಾಕಿ ಮುಚ್ಚಲಾಗಿದೆ. ಇದರಿಂದ ರಸ್ತೆಯಲ್ಲಿ ಬೃಹತ್ ಗಾತ್ರದ ವಾಹನಗಳು ಸಂಚರಿಸಿದರೆ ಪೈಪ್‌ಲೈನ್‌ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಕಬ್ಬಿಣದ ಪೈಪ್‌ಗಳ ಗುಣಮಟ್ಟವೂ ತೀರಾ ಕಳಪೆಯಾಗಿದ್ದು, ಬೇಗನೆ ತುಕ್ಕು ಹಿಡಿಯುತ್ತಿವೆ. ಜೊತೆಗೆ ಪೈಪ್‌ ಅಳವಡಿಕೆಗೆ ತೋಡಿರುವ ಗುಂಡಿಗಳನ್ನು ಕೆಲವೆಡೆ ಮುಚ್ಚದ ರಸ್ತೆಗಳು ತೀರಾ ಹದಗೆಟ್ಟಿವೆ.

ADVERTISEMENT

ಓವರ್‌ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ಗುಣಮಟ್ಟದ ಕೊರತೆ ಇದೆ. ಟ್ಯಾಪ್ ಅಳವಡಿಸಲು ಹಾಕಲಾದ ಸಿಮೆಂಟ್ ಕಂಬ, ಫೌಂಡೇಶನ್ ಕಳಪೆಯಾಗಿದ್ದು ನೀರು ಬರುವ ಮುನ್ನವೇ ಮುರಿದು ಬೀಳುತ್ತಿವೆ. ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ಟ್ಯಾಂಕ್‌ನ ಗೋಡೆಗಳು ಮತ್ತು ತಳಪಾಯದಲ್ಲಿ ಬಿರುಕು ಕಾಣಿಸಿಕೊಂಡಿವೆ. ಇದರಿಂದ ನೀರು ಸೋರಿಕೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕೆಲವೆಡೆ ರಸ್ತೆಯನ್ನು ಗುಣಮಟ್ಟದ ಕಾಂಕ್ರೀಟ್ ಅಥವಾ ಜಲ್ಲಿ ಬಳಸದೆ ಕೇವಲ ಮಣ್ಣು, ಕಳಪೆ ಮಿಶ್ರಣ ಬಳಸಿ ಗುಂಡಿ ಮುಚ್ಚಿದ್ದಾರೆ. ಇನ್ನೂ ಕೆಲವು ಕಡೆ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು, ಅಗೆದ ಮಣ್ಣಿನ ರಾಶಿಗಳು ಉಳಿದಿದ್ದು ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಜೊತೆಗೆ ಗುಂಡಿ ಮುಚ್ಚದ ಮಣ್ಣು ಗಾಳಿಯಲ್ಲಿ ಹಾರಿ ಮನೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ.     

ಸರಿಯಾದ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕು. ಸರ್ಕಾರವು ಗುತ್ತಿಗೆದಾರರಿಗೆ ಸ್ಪಷ್ಟ ಗಡುವು ನೀಡಬೇಕು. ಕಾಮಗಾರಿ ಪೂರ್ಣಗೊಳಿಸದವರಿಗೆ ದಂಡ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗುತ್ತಿಗೆದಾರರಿಗೆ ನೋಟಿಸ್ 

ಕಳಪೆ ಗುಣಮಟ್ಟದ ಪೈಪ್‌ಲೈನ್ ಮತ್ತು ಇತರೆ ಸಾಮಗ್ರಿಗಳ ಬಳಕೆ. ಅವೈಜ್ಞಾನಿಕವಾಗಿ ಪೈಪ್‌ಲೈನ್‌ ಅಳವಡಿಸಿ ರಸ್ತೆ ನಾಶ ಮಾಡಿರುವುವು. ಗುಂಡಿ ಮುಚ್ಚದೆ ಬಿಟ್ಟಿರುವುದು‌. ಓವರ್‌ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ಗುಣಮಟ್ಟದ ಕೊರತೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳದಿರುವ ಕುರಿತು ಸಂಬಂಧಪಟ್ಟ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.

ರಾಜಶೇಖರ್, ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.