ADVERTISEMENT

ಬಂಗಾರಪೇಟೆ: ಒಕ್ಕಲಿಗರ ಪ್ರತಿಭಟನೆ

ಕೆಂಪೇಗೌಡರ ಜಯಂತಿಗೆ ಆಹ್ವಾನಿಸಿಲ್ಲ ಎಂಬ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:44 IST
Last Updated 27 ಜೂನ್ 2025, 15:44 IST
ಬಂಗಾರಪೇಟೆ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಒಕ್ಕಲಿಗ ಮುಖಂಡರು ಪ್ರತಿಭಟಿಸಿದರು
ಬಂಗಾರಪೇಟೆ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಒಕ್ಕಲಿಗ ಮುಖಂಡರು ಪ್ರತಿಭಟಿಸಿದರು   

ಬಂಗಾರಪೇಟೆ: ತಾಲ್ಲೂಕಿನ ಸಮುದಾಯದ ಮುಖಂಡರಿಗೆ ಮಾಹಿತಿ ನೀಡದೆ ಮತ್ತು ಸರ್ಕಾರದ ನಿರ್ದೇಶನದಂತೆ ಜಯಂತಿ ಆಚರಿಸದೆ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ಒಕ್ಕಲಿಗ ಸಮುದಾಯದ ಮುಖಂಡರು ಶುಕ್ರವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿದರು. 

ಪುರಸಭೆ ಸದಸ್ಯ ರಾಕೇಶ್ ಮಾತನಾಡಿ, ಬೆಂಗಳೂರು ನಗರ ಕಟ್ಟಿದ ಕೆಂಪೇಗೌಡ ಅವರ ಜಯಂತಿಯನ್ನು ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ವರ್ಷವೂ ಅದ್ದೂರಿಯಾಗಿ ಆಚರಿಸುವ ವಿಶ್ವಾಸ ಇಟ್ಟುಕೊಂಡಿದ್ದೆವು. ಆದರೆ, ತಾಲ್ಲೂಕು ಆಡಳಿತ ಕಡೆಗಣಿಸಿದೆ. ಕೆಂಪೇಗೌಡ ಜಯಂತಿ ಆಚರಣೆ ಮತ್ತು ಪೂರ್ವಭಾವಿ ಸ,ಭೆಗೆ ಒಕ್ಕಲಿಗ ಸಮುದಾಯದ ಮುಖಂಡರನ್ನು ಆಹ್ವಾನಿಸಿಲ್ಲ. ಈ ಮೂಲಕ ತಾಲ್ಲೂಕು ಆಡಳಿತವು ತನ್ನ ಮನಸ್ಸಿಗೆ ಬಂದಂತೆ ಜಯಂತಿ ಆಚರಿಸಿ, ಕೆಂಪೇಗೌಡ ಮತ್ತು ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಆರೋಪಿಸಿದರು. 

ತಾಲ್ಲೂಕು ಆಡಳಿತದ ಈ ಧೋರಣೆ ಖಂಡಿಸಿ ತಾಲ್ಲೂಕು ಆಡಳಿತ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡರ ಪ್ರತಿಮೆ ಹಾಗೂ ಸುತ್ತಮುತ್ತಲೂ ಸ್ವಚ್ಛತೆ ಮತ್ತು ಪ್ರತಿಮೆಗೆ ಅಲಂಕಾರವೂ ಮಾಡಿಲ್ಲ. ಜಯಂತಿ ಆಚರಣೆಗೆ ಸರ್ಕಾರದಿಂದ ₹2 ಲಕ್ಷ ಧವಗೊಎವ ಬರುತ್ತದೆ. ಆದರೆ, ಈ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು. 

ADVERTISEMENT

ತಹಶೀಲ್ದಾರ್ ಎಸ್.ವೆಂಕಟೇಶಪ್ಪ ಮಾತನಾಡಿ, ‘ಅದ್ದೂರಿ ಕೆಂಪೇಗೌಡ ಜಯಂತಿ ಆಚರಣೆಗೆ ಎದುರಾದ ಲೋಪದೋಷಗಳ ಬಗ್ಗೆ ಪರಿಶೀಲಿಸಲಾಗುವುದು. ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿಗೆ ನಾನು ಅಧ್ಯಕ್ಷ. ಉಪಾಧ್ಯಕ್ಷ ಹಾಗೂ ಎಲ್ಲ ಸದಸ್ಯರನ್ನು ಕರೆದು ವಿಚಾರಿಸಿ ಮಾಹಿತಿ ಪಡೆಯಲಾಗುತ್ತದೆ’ ಎಂದರು.

ಜಯಂತಿ ಆಚರಣೆಗೆ ಎರಡು ಬಾರಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆದರೆ, ಸಭೆಗೆ ಸಮುದಾಯದ ಮುಖಂಡರು ಯಾರೂ ಬರಲಿಲ್ಲ. ಈ ಸಂಬಂಧ ನಮ್ಮ ಬಳಿ ದಾಖಲೆಗಳಿದ್ದು, ಈ ಕುರಿತು ಶಾಸಕರಿಗೆ ಮಾಹಿತಿ ನೀಡಿದ್ದೇನೆ. ಶಾಸಕರು ಸಹ ಸರಳವಾಗಿ ಜಯಂತಿ ಮಾಡಲು ಸೂಚಿಸಿದ್ದರು ಎಂದು ತಿಳಿಸಿದರು. 

ಪ್ರತಿಭಟನೆಯಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ಎಚ್.ಕೆ. ನಾರಾಯಣಸ್ವಾಮಿ, ಆಲೂಗಡ್ಡೆ ಶ್ರೀನಿವಾಸ್, ಮಂಜುನಾಥ, ಸಂದೀಪಗೌಡ, ಆಂಜನೇಯ, ವೈ. ಶ್ರೀನಿವಾಸ, ರವಿ, ನಾರಾಯಣಸ್ವಾಮಿ, ರಾಮೇಗೌಡ ಭಾಗವಹಿಸಿದ್ದರು.

‘ಸರಳವಾಗಿ ಆಚರಿಸಲು ಹೇಳಿದ್ದೆ’ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ ಮಾತನಾಡಿ ‘ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಬೇಕು ಎಂದು ನಾನೇ ಹೇಳಿದ್ದೆ. ಹಾಗೆಂದು ನಾನು ಯಾರನ್ನೂ ಆಹ್ವಾನಿಸಬೇಡಿ ಎಂದಿರಲಿಲ್ಲ’ ಎಂದು ತಿಳಿಸಿದರು.  ಪ್ರೊಟೊಕಾಲ್ ಮೂಲಕ ಎಲ್ಲರನ್ನೂ ಕರೆದು ಜಯಂತಿ ಆಚರಿಸಬೇಕು. ಯಾವುದೇ ಜಯಂತಿಯನ್ನು ಆಚರಿಸುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕರ್ತವ್ಯವಾಗಿದ್ದು ಕಾರ್ಯಾಂಗ ಮತ್ತು ಶಾಸಕಾಂಗವನ್ನು ಸಮಾನವಾಗಿ ತೆಗೆದುಕೊಂಡು ಹೋಗಬೇಕು ಎಂದರು. ಆಗಿರುವ ತಪ್ಪನ್ನು ಸರಿಮಾಡಿಕೊಂಡು ಹೋಗುತ್ತೇನೆ ಎಂದು ಹೇಳಬೇಕು ಎಂದು ತಹಶೀಲ್ದಾರ್‌ರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.