ADVERTISEMENT

ಬಂಗಾರಪೇಟೆ: ಸಮೀಕ್ಷೆ ಕಾರ್ಯ ಚುರುಕಿಗೆ ಸೂಚನೆ

ನೇರಳೆಕೆರೆಯಲ್ಲಿ ಜಿಲ್ಲಾಧಿಕಾರಿ ಸಮೀಕ್ಷೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 1:51 IST
Last Updated 27 ಸೆಪ್ಟೆಂಬರ್ 2025, 1:51 IST
ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮತ್ತು ಜಿಪಂ ಸಿಇಓ ಪ್ರವೀಣ್ ಬಾಗೇವಾಡಿ ಭೇಟಿ ನೀಡಿ ಸಮೀಕ್ಷೆ ಪರಿಶೀಲನೆ ನಡೆಸಿದರು 
ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮತ್ತು ಜಿಪಂ ಸಿಇಓ ಪ್ರವೀಣ್ ಬಾಗೇವಾಡಿ ಭೇಟಿ ನೀಡಿ ಸಮೀಕ್ಷೆ ಪರಿಶೀಲನೆ ನಡೆಸಿದರು    

ಬಂಗಾರಪೇಟೆ: ಜಿಲ್ಲೆಯಾದ್ಯಂತ ಸಮೀಕ್ಷೆ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಸಮೀಕ್ಷೆ ನಿಧಾನವಾಗಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳು ಬಗೆಹರಿದಿದ್ದು, ಇಂದಿನಿಂದ ಸಮೀಕ್ಷೆ ಕಾರ್ಯ ಚುರುಕುಗೊಳಿಸಲು ನೋಡಲ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ತಾಲ್ಲೂಕಿನ ನೇರಳೆಕೆರೆ ಗ್ರಾಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪರಿಶೀಲಿಸಿ ಮಾತನಾಡಿದ ಅವರು, ಸಮೀಕ್ಷೆ ಸಮಾಜದ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಅಳೆಯಲು ಮಾನದಂಡ. ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆಯಿಂದ ಬೇರೆ ಇಲಾಖೆಯ ಅಧಿಕಾರಿಗಳನ್ನು ಸಮೀಕ್ಷೆಗೆ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಶನಿವಾರದಿಂದ ಶೇ 100ರಷ್ಟು ಸಮೀಕ್ಷೆ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ 3,471 ಬ್ಲಾಕ್‌ಗಳಿದ್ದು, ನಿತ್ಯ 34 ಸಾವಿರ ಮನೆಗಳ ಸಮೀಕ್ಷೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಕಳೆದ ನಾಲ್ಕು ದಿನದಿಂದ ಸಮೀಕ್ಷೆ ಕುಂಠಿತಗೊಂಡಿದ್ದು, ಅದನ್ನು ಸರಿದೂಗಿಸಲು ಪ್ರತಿಯೊಬ್ಬ ಗಣತಿದಾರರು ಕನಿಷ್ಠ 10 ಮನೆಗಳನ್ನು ಸಮೀಕ್ಷೆ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಅ.7ಕ್ಕೆ ಸಮೀಕ್ಷೆ ಪೂರ್ಣಗೊಳ್ಳಬೇಕಿದೆ. ಹಾಗಾಗಿ ಸಮೀಕ್ಷೆದಾರರು ಶೀಘ್ರ ಸಮೀಕ್ಷೆ ಮುಗಿಸಬೇಕು. ತಹಶೀಲ್ದಾರ್, ಬಿಇಒ ಹಾಗೂ ಇತರೆ ಅಧಿಕಾರಿಗಳು ಸಮೀಕ್ಷೆ ಕಾರ್ಯವನ್ನು ಪರಿಶೀಲನೆ ನಡೆಸಬೇಕು. ಶುಕ್ರವಾರ 11,230 ಮನೆಗಳ ಸಮೀಕ್ಷೆಯಾಗಿದೆ ಎಂದರು. 

ಈ ವೇಳೆ ಜಿ.ಪಂ ಸಿಇಒ ಪ್ರವೀಣ್ ಬಾಗೇವಾಡಿ, ತಹಶೀಲ್ದಾರ್ ಕೆ.ಎನ್.ಸುಜಾತಾ, ತಾ.ಪಂ.ಇಒ ರವಿಕುಮಾರ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಅನಿತ, ಪ್ರಭಾರಿ ಬಿಇಒ ಶಶಿಕಲಾ, ರಾಜಸ್ವ ನಿರೀಕ್ಷಕ ಅಜಯ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಮಧುಚಂದ್ರ ಹಾಗೂ ಶಿಕ್ಷಕ ಕೆ.ಜಿ.ಶ್ರೀನಿವಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.