ADVERTISEMENT

ಬಂಗಾರಪೇಟೆ: ನಿರ್ವಹಣೆ ಇಲ್ಲದೆ ಸೊರಗಿದ ದೇವಾಲಯಗಳು

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದರೂ ಅಭಿವೃದ್ಧಿ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 3:08 IST
Last Updated 21 ಅಕ್ಟೋಬರ್ 2025, 3:08 IST
ಬಂಗಾರಪೇಟೆ ತಾಲ್ಲೂಕಿನ ಕುಂದರಸನಹಳ್ಳಿ ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯ
ಬಂಗಾರಪೇಟೆ ತಾಲ್ಲೂಕಿನ ಕುಂದರಸನಹಳ್ಳಿ ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯ   

ಬಂಗಾರಪೇಟೆ: ಐತಿಹಾಸಿಕ ಪ್ರಸಿದ್ಧ ದೇವಾಲಯಗಳಿಗೆ ಮೂಲಭೂತ ಸೌಲಭ್ಯ ಹಾಗೂ ಸೂಕ್ತ ನಿರ್ವಹಣೆ ಇಲ್ಲದೆ ದೇವಾಲಯಗಳು ಸೊರಗಿದೆ.

ತಾಲ್ಲೂಕಿನ ಕಾಮಸಮುದ್ರ ಹೋಬಳಿ ಚಿಕ್ಕ ಕಳವಂಚಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ಕುಂದರಸನಹಳ್ಳಿ, ಬತ್ತಲಹಳ್ಳಿ,  ದೋಣಿಮಡಗು ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ಆದರೆ, ದೇವಾಲಯವು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿವೆ. ಇಲಾಖೆ ಅಧಿಕಾರಿಗಳು ಈ ದೇವಾಲಯಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಕುಡಿವ ನೀರು, ರಸ್ತೆ, ವಿದ್ಯುತ್‌ನಂತಹ ಮೂಲ ಸೌಕರ್ಯ ಕೊರತೆಯಿಂದ ವಂಚಿತವಾಗಿದೆ.

ಈ ದೇವಾಲಯಗಳು ಗ್ರಾಮೀಣ ಭಾಗದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿವೆ. ಆದರೆ ಸಂಪನ್ಮೂಲಗಳ ಕೊರತೆ ಹಾಗೂ ಇಲಾಖೆಯ ನಿರ್ಲಕ್ಷ್ಯದಿಂದ ದೇವಾಲಯಗಳು ಕಳೆಗುಂದಿವೆ.

ADVERTISEMENT

ಚಿಕ್ಕಕಳವಂಚಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯವು ಐದು ಎಕರೆ ವಿಸ್ತೀರ್ಣದಲ್ಲಿದೆ. ದೇವಾಲಯವು ಬೆಟ್ಟದ ಮೇಲಿದ್ದು ಆಕರ್ಷಣೀಯವಾಗಿದೆ. ಹಲವು ವರ್ಷಗಳ ಹಿಂದೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದಿ.ಮುನಿರಾಜು ಅವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ರೈತ ಸಮುದಾಯ ಭವನ, ಸಿಸಿ ರಸ್ತೆ, ಬಯಲು ರಂಗಮಂದಿರ ಮತ್ತು ಸಾರ್ವಜನಿಕರ ಶೌಚಾಲಯ ನಿರ್ಮಿಸಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಸಮುದಾಯ ಭವನ, ಕೊಳವೆ ಬಾವಿ ಕೊರೆಸಿದ್ದಾರೆ. ಅರಣ್ಯ ಇಲಾಖೆಯಿಂದ ಸಸ್ಯಗಳನ್ನು ನಾಟಿ ಮಾಡಿದ್ದಾರೆ.

ಈ ದೇವಾಲಯದಲ್ಲಿ ವಾರಕ್ಕೊಮ್ಮೆ ಪೂಜೆ ಪುನಸ್ಕಾರ ನಡೆಯುತ್ತವೆ. ಆದರೆ, ಮದುವೆ ಹಾಗೂ ಇತರೆ ಶುಭ ಸಮಾರಂಭಗಳು ಸಾಮಾನ್ಯವಾಗಿ ನಡೆಯುತ್ತವೆ. ಹಾಗಾಗಿ ಸೂಕ್ತ ನಿರ್ವಹಣೆ ಇಲ್ಲದೆ ದೇವಾಲಯ ಸುತ್ತಲೂ ಕಸದಿಂದ ತುಂಬಿದೆ. ಶೌಚಾಲಯದಲ್ಲಿ ನೀರಿಲ್ಲದೆ ಸುತ್ತಲೂ ಗಿಡಗಂಟೆ ಬೆಳೆದಿದ್ದು ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದೇವಾಲಯ ಅಭಿವೃದ್ಧಿಗೆ ಒತ್ತು ನೀಡಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

ದೇವಾಲಯಗಳು ಸಂಸ್ಕೃತಿ ಪ್ರತೀಕ

ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ ಅವು ನಮ್ಮ ಸಂಸ್ಕೃತಿ ಪರಂಪರೆ ಮತ್ತು ವಾಸ್ತುಶಿಲ್ಪದ ಪ್ರತೀಕ. ಅವುಗಳ ರಕ್ಷಣೆ ಕೇವಲ ಸರ್ಕಾರ ಅಥವಾ ಆಡಳಿತ ಮಂಡಳಿಯ ಜವಾಬ್ದಾರಿಯಲ್ಲ ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ನಡೆದಾಗ ಮಾತ್ರ ದೇವಾಲಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಲು ಸಾಧ್ಯ. ರವಿ ಪೋಲೇನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.