ಕೋಲಾರ: ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ಅಕ್ರಮವಾಗಿ ವಾಸವಾಗಿ ಕೂಲಿ ಕೆಲಸದಲ್ಲಿ ತೊಡಗಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈ ಇಬ್ಬರ ಬಳಿ ಇದ್ದ ದಾಖಲೆಗಳನ್ನು ಪರಿಶೀಲಿಸಿದ್ದು, ಬಾಂಗ್ಲಾದೇಶದ ಪ್ರಜೆಗಳು ಎಂಬುದು ದೃಢಪಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಇಬ್ಬರು ಪಟ್ಟಣದ ಬಳಿ ಬಯಲು ಪ್ರದೇಶದಲ್ಲಿ ಶೆಡ್ ಹಾಕಿಕೊಂಡು ನೆಲೆಸಿದ್ದರು ಎಂಬುದು ಗೊತ್ತಾಗಿದೆ. ಇವರ ಸಂಪರ್ಕದಲ್ಲಿದ್ದ ಇನ್ನಿತರ ಸುಮಾರು ಹತ್ತು ಮಂದಿ ಕೂಡ ಬಾಂಗ್ಲಾದೇಶದ ಆಗಿರಬಹುದೆಂಬ ಶಂಕೆ ಇದ್ದು ಅವರನ್ನೂ ವಶಕ್ಕೆ ಪಡೆದು ದಾಖಲೆ ಪರಿಶೀಲಿಸುತ್ತಿದ್ದಾರೆ. ನಾಲ್ಕು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ 12 ಮಂದಿ ಇರುವುದು ಗೊತ್ತಾಗಿದೆ.
ವಶಕ್ಕೆ ಪಡೆದಿರುವ ಇಬ್ಬರನ್ನು ಬೆಂಗಳೂರಿನ ಡಿಟೆನ್ಷನ್ ಕೇಂದ್ರಕ್ಕೆ ಕಳಿಸಲಿದ್ದಾರೆ. ಯಾವಾಗ ದೇಶಕ್ಕೆ ನುಸುಳಿದರು, ಎಷ್ಟು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ, ಇವರ ಜೊತೆಗೆ ಮತ್ಯಾರು ಬಂದಿದ್ದಾರೆ, ಆಧಾರ್ ಅಥವಾ ಬೇರೆ ಯಾವುದಾದರೂ ದಾಖಲೆ ಹೊಂದಿದ್ದಾರೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.