ADVERTISEMENT

ಫಲಾನುಭವಿಗಳಿಗೆ ಸವಲತ್ತು ಕಲ್ಪಿಸಿ: ಶಾಸಕಿ ರೂಪಕಲಾ

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:28 IST
Last Updated 31 ಮೇ 2022, 4:28 IST
ಬೇತಮಂಗಲ ಗ್ರಾ.ಪಂ.ನಲ್ಲಿ ಹಮ್ಮಿಕೊಂಡಿದ್ದ ಸದಸ್ಯರ ಸಭೆಯಲ್ಲಿ ಪಂಚಾಯಿತಿ ನೌಕರರು ಶಾಸಕಿ ಎಂ. ರೂಪಕಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬೇತಮಂಗಲ ಗ್ರಾ.ಪಂ.ನಲ್ಲಿ ಹಮ್ಮಿಕೊಂಡಿದ್ದ ಸದಸ್ಯರ ಸಭೆಯಲ್ಲಿ ಪಂಚಾಯಿತಿ ನೌಕರರು ಶಾಸಕಿ ಎಂ. ರೂಪಕಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೇತಮಂಗಲ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗ್ರಾ.ಪಂ. ಮಟ್ಟದಲ್ಲಿ ಬರುವ ವಿವಿಧ ಸೌಲಭ್ಯಗಳನ್ನು ಅಧಿಕಾರಿಗಳು ಫಲಾನುಭವಿಗಳಿಗೆ ತಲುಪಿಸಬೇಕು’ ಎಂದು ಶಾಸಕಿ ಎಂ. ರೂಪಕಲಾ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾ.ಪಂ.ಗೆ ಬಂದಿದ್ದಾರೆ. ಹಂತ ಹಂತವಾಗಿ ಅಭಿವೃದ್ಧಿ ಬಗ್ಗೆ ಸದಸ್ಯರು ತಿಳಿಸಿ ಸಹಕರಿಸಬೇಕು ಎಂದು ಹೇಳಿದರು.

ADVERTISEMENT

ತಾಲ್ಲೂಕಿನಲ್ಲಿಯೇ ಬೇತಮಂಗಲ ದೊಡ್ಡ ಪಂಚಾಯಿತಿಯಾಗಿದೆ. ಆದರೆ, ಅಭಿವೃದ್ಧಿ ಕೆಲಸದಲ್ಲಿ ಮಾತ್ರ ಹಿಂದುಳಿದಿದೆ. ಸದಸ್ಯರು ಆರೋಪ ಮಾಡುವುದನ್ನು ಬಿಟ್ಟು ತಮ್ಮ ಬ್ಲಾಕ್‍ಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಗ್ರಾ.ಪಂ. ಸದಸ್ಯ ಶೇಷಾದ್ರಿ ಮಾತನಾಡಿ, ಬೇತಮಂಗಲದ ಹಳೆ ಮದ್ರಾಸ್ ರಸ್ತೆಯಲ್ಲಿ ಕೆಲವು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ. ಈ ಸಮಸ್ಯೆ ಬಗ್ಗೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದರು.

ಈ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಅನುದಾನ ಬಿಡುಗಡೆ ಮಾಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕರು ಉತ್ತರಿಸಿದರು.

ಎರಡನೇ ಬ್ಲಾಕ್‌ನಲ್ಲಿ ಶಾಸಕರ ಅನುದಾನದಡಿ ಕೊಳವೆಬಾವಿ ಕೊರೆಯಿಸಲಾಗಿದೆ. ಉತ್ತಮ ನೀರು ಕೂಡ ಲಭಿಸಿದೆ. ಆದರೆ, ಗ್ರಾ.ಪಂ. ಅಧಿಕಾರಿಗಳು ಇದುವರೆಗೂ ಪಂಪ್‌, ಮೋಟಾರ್ ಅಳವಡಿಸಿಲ್ಲ ಎಂದು ಸದಸ್ಯರು ದೂರು ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಗಣೇಶ್, ಉಪಾಧ್ಯಕ್ಷ ನಂದೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ಶೇಷಾದ್ರಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.