
ಬೇತಮಂಗಲ: ಇಲ್ಲಿನ ನಾಡ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ದಶಕಗಳಿಂದ ಇಲ್ಲಿನ ಸಿಬ್ಬಂದಿ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ.
ಬೇತಮಂಗಲ ನಾಡ ಕಚೇರಿಗೆ ಪ್ರತಿನಿತ್ಯ ನೂರಾರು ಮಂದಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಹಣಿ ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಕೆಲಸಕ್ಕಾಗಿ ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ, ಕಚೇರಿಯಲ್ಲಿ ಮೂಲಸೌಲಭ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ಸ್ಥಳಾವಕಾಶದ ಕೊರತೆ, ಜನರು ನಿಲ್ಲಲು ಹೆಚ್ಚು ಜಾಗವಿಲ್ಲ. ದಾಖಲೆಗಳನ್ನು ಸುರಕ್ಷಿತವಾಗಿಡಲು ಪ್ರತ್ಯೇಕ ಕೊಠಡಿಗಳಿಲ್ಲ. ಕುಡಿಯುವ ನೀರು, ಶೌಚಾಲಯ ಯಾವ ಸೌಲಭ್ಯವೂ ಇಲ್ಲದೆ ದೂರದಿಂದ ಬರುವ ವೃದ್ಧರು ಹಾಗೂ ಮಹಿಳೆಯರಿಗೆ ತೊಂದರೆಯಾಗುತ್ತಿದೆ.
ಪ್ರತಿ ಬಾರಿ ಚುನಾವಣೆ ವೇಳೆ ನಾಡಕಚೇರಿ ಕಟ್ಟಡ ನಿರ್ಮಾಣದ ಭರವಸೆ ಸಿಗುತ್ತದೆ. ಆದರೆ, ಕೆಲಸ ಮಾತ್ರ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಹಾಗಾಗಿ ಈಗಲಾದರೂ ಅಧಿಕಾರಿಗಳು ಹಾಗೂ ಸಾರ್ವಜನಿಕರು ಎಚ್ಚೆತ್ತು ಸುಸಜ್ಜಿತ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.