
ಕೆಜಿಎಫ್: ನಾಲ್ಕು ವರ್ಷದ ನಂತರ ತುಂಬಿರುವ ಬೇತಮಂಗಲ ಕೆರೆ ಕೋಡಿ ಪ್ರದೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಹಿನ್ನೆಲೆ ನೂರಾರು ಪ್ರವಾಸಿಗಳು ನಿರಾಸೆಯಿಂದ ಮನೆಗೆ ಹಿಂತಿರುಗುವಂತಾಗಿದೆ.
ಅ.11 ರಂದು ಕೆರೆಯು ಬೇತಮಂಗಲ ಗೇಟ್ ಮತ್ತು ಕೋಡಿಹಳ್ಳಿಯ ಕೋಡಿ ಕಟ್ಟೆಯಿಂದ ನೀರು ಹರಿದು ಹೋಗಲಾರಂಭಿಸಿತು. ಬೇತಮಂಗಲ ಜಲಾಶಯದ ಗೇಟ್ ಶಿಥಿಲವಾಗಿರುವ ಆತಂಕದಿಂದ ಅದರ ಮೇಲೆ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಲಾಗಿದೆ. ಪ್ರವಾಸಿಗರು ದೂರದಿಂದಲೇ ಗೇಟ್‌ನಲ್ಲಿ ಹರಿಯುವ ನೀರನ್ನು ನೋಡಿ ಆನಂದಿಸುತ್ತಿದ್ದಾರೆ. ಕೋಡಿಹಳ್ಳಿಯ ಕೋಡಿಯಲ್ಲಿ ಹರಿಯುವ ನೀರಿನಲ್ಲಿ ಪ್ರವಾಸಿಗಳು ಇಳಿದು ಆಟವಾಡುತ್ತಿದ್ದರು. ಈಜು ಬಲ್ಲವರು ಕೆರೆಗೆ ಧುಮುಕಿ ಈಜುತ್ತಿದ್ದರು. ಪ್ರತಿನಿತ್ಯ ಸಾವಿರಾರು ಮಂದಿ ಕುಟುಂಬ ಸಮೇತ ಆಗಮಿಸಿ ಕೋಡಿ ನೀರಿನಲ್ಲಿ ಸಂಭ್ರಮಿಸುತ್ತಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶದಿಂದಾಗಿ ಅನೇಕರಿಗೆ ನಿರಾಸೆಯಾಗುವಂತಾಗಿದೆ.
ಕೋಡಿಹಳ್ಳಿಯ ಕೋಡಿಯಿಂದ ಹೊರಹೋಗುವ ನೀರಿನಿಂದ ಇದುವರೆವಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ. ಕೋಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಹರಿವು ಹೆಚ್ಚಾದಾಗಿನಿಂದ ಜಲಮಂಡಳಿ ಮತ್ತು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರನ್ನು ನಿರ್ಬಂಧಿಸುತ್ತಿದ್ದರು. ಕೋಡಿ ನೀರಿನ ಬಳಿ ಯಾವುದೇ ಪ್ರಾಣಾಪಾಯ ಸಂಭವಿಸಬಾರದು ಎಂಬ ಉದ್ದೇಶದಿಂದ ಆದೇಶ ಹೊರಡಿಸಲಾಗಿದೆ.
ಕೋಡಿ ಪ್ರದೇಶಕ್ಕೆ ನೂರಾರು ವಾಹನಗಳು ಬರುವುದು ತಿಳಿದಿದ್ದರೂ, ಪಂಚಾಯಿತಿ ವತಿಯಿಂದ ಯಾವುದೇ ಅಭಿವೃದ್ಧಿ ಆಗಿರಲಿಲ್ಲ. ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡ ಮೇಲೆ ರಸ್ತೆ ದುರಸ್ತಿ ಮಾಡಿ, ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಪಂಚಾಯಿತಿಯಿಂದ ಕೋಡಿ ಬಳಿ ಕಟ್ಟೆ ನಿರ್ಮಾಣ ಮಾಡಿದ್ದರೆ, ಮಹಿಳೆಯರು ಮತ್ತು ಮಕ್ಕಳು ಧೈರ್ಯವಾಗಿ ಕೆರೆ ಕೋಡಿಯಲ್ಲಿ ಆಟವಾಡಲು ಅನುಕೂಲವಾಗುತ್ತಿತ್ತು ಎಂಬುದು ಸ್ಥಳೀಯರ ಮಾತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.