ADVERTISEMENT

ಕೋಲಾರ: ₹10.50 ಲಕ್ಷ ಮೌಲ್ಯದ 21 ಬೈಕ್‌ ವಶ

ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 15:36 IST
Last Updated 24 ಆಗಸ್ಟ್ 2023, 15:36 IST
ಕೋಲಾರದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು
ಕೋಲಾರದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು   

ಕೋಲಾರ: ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಅವರಿಂದ ₹ 10.50 ಲಕ್ಷ ಮೌಲ್ಯದ 21 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ, ಹಾಲಿ ಕೋಲಾರದ ಶಹಿಂಶಾ ನಗರದ ಮುಜೀಬ್‌ ಪಾಷ‌ ಅಲಿಯಾಸ್‌ ಮುಜಮಿಲ್‌ (ಮುಜ್ಜು) ಹಾಗೂ ಸಾಧಿಕ್ ಪಾಷ ಬಂಧಿತ ಆರೋಪಿಗಳು.

ನಗರ ಠಾಣೆಯ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇವರನ್ನು ಪ್ರಶ್ನಿಸಿದ್ದಾರೆ. ಕಳುವು ಮಾಡಿರುವ ದ್ವಿಚಕ್ರ ವಾಹನವೆಂದು ಆಗ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ADVERTISEMENT

ಬಳಿಕ ವಿಚಾರಣೆಗೆ ಒಳಪಡಿಸಲಾಗಿ, ತಾವು ಒಂದೂವರೆ ವರ್ಷದಿಂದ ಕೋಲಾರ ನಗರ, ಚಿಕ್ಕಬಳ್ಳಾಪುರ, ಚಿಂತಾಮಣಿ ಕಡೆಗಳಲ್ಲಿ ದ್ವಿಚಕ್ರ ವಾಹನ ಕದ್ದು, ಅದೇ ಕಂಪನಿಯ ವಾಹನ ದಾಖಲಾತಿಗಳನ್ನು ಕೋಲಾರ ಮುಂತಾದ ಕಡೆ ಪಾರ್ಕಿಂಗ್ ಲಾಟ್‍ಗಳಲ್ಲಿನ ವಾಹನಗಳ ಟೂಲ್‍ಕಿಟ್‍ನಲ್ಲಿ ಕದ್ದು, ಅದರಲ್ಲಿನ ಆರ್.ಸಿ. ನಂಬರ್, ಎಂಜಿನ್ ನಂಬರ್, ಚಾಸ್ಸಿಸ್ ನಂಬರ್‌ಗಳನ್ನು ಈಗಾಗಲೇ ಕದ್ದಿರುವ ವಾಹನಗಳಿಗೆ ಪಂಚಿಂಗ್ ಟೂಲ್ಸ್‌ನಿಂದ ಪಂಚ್ ಮಾಡಿ, ಹೊಸ ಕೀ ಸೆಟ್ ಅಳವಡಿಸಿ ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಕೋಲಾರ ಹಾಗೂ ಸುತ್ತಮುತ್ತಲ ಮಾರಾಟ ಮಾಡಿದ್ದ ಸುಮಾರು ₹ 10.50 ಲಕ್ಷ ಮೌಲ್ಯದ 21 ದ್ವೀಚಕ್ರ ವಾಹನಗಳನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಕೋಲಾರದ ಗಲ್‍ಪೇಟೆ, ಬೆಂಗಳೂರು ನಗರದ ಕೆ.ಜೆ.ಹಳ್ಳಿ ಹಾಗೂ ಇತರೆ ಠಾಣೆಗಳಲ್ಲಿ ಈ ಹಿಂದೆ ಪ್ರಕರಣಗಳು ದಾಖಲಾಗಿದ್ದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿ.ಬಿ.ಬಾಸ್ಕರ್, ಡಿವೈಎಸ್ಪಿ ಟಿ.ಮಲ್ಲೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರಠಾಣೆ ವೃತ್ತ ನಿರೀಕ್ಷಕ ಆರ್.ಹರೀಶ್, ಮಹಿಳಾ ಪಿಎಸ್‍ಐ ಹೇಮಲತಾ, ಎಎಸ್‍ಐ ಸೈಯದ್ ಖಾಸಿಂ, ಅಪರಾಧ ವಿಭಾಗದ ಸಿಬ್ಬಂದಿ ಮೋಹನ್, ಆರ್.ನಾರಾಯಣಸ್ವಾಮಿ, ಶ್ರೀನಾಥ್, ಸತೀಶ್‍ ಕುಮಾರ್, ಜೀಪ್ ಚಾಲಕರಾದ ಮುರಳಿಮೋಹನ್ ಹಾಗೂ ನಾಗರಾಜ್ ಭಾಗವಹಿಸಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.