ADVERTISEMENT

ಬಂಗಾರಪೇಟೆ | ಟ್ರಯಲ್ ನೆಪದಲ್ಲಿ ಬೈಕ್‌ ಕಳವು: ಆರೋಪಿ ಸೆರೆ

₹5.5 ಲಕ್ಷ ಮೌಲ್ಯದ ಐದು ಬೈಕ್‌ಗಳು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:27 IST
Last Updated 2 ಆಗಸ್ಟ್ 2025, 5:27 IST
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಪೊಲೀಸರು ಬಂಧಿತನಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳು
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಪೊಲೀಸರು ಬಂಧಿತನಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳು   

ಬಂಗಾರಪೇಟೆ: ಟ್ರಯಲಿಂಗ್ ಹೋಗಿ ಬರುವ ನೆಪದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಬೂದಿಕೋಟೆ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪ್ರದೀಪ್ ಎಚ್ ಬಂಧಿತ ಆರೋಪಿ. ಬಂಧಿತನಿಂದ ₹5.5 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ತಾಲ್ಲೂಕಿನ ಬೂದಿಕೋಟೆ ಗ್ರಾಮದ ನಿವಾಸಿ ಅಶೋಕ್ ಎಂಬುವರು ತಮ್ಮ ಬೈಕ್ ಮಾರಾಟಕ್ಕೆ ಮುಂದಾಗಿದ್ದರು. ಈ ಬೈಕ್ ಖರೀದಿಸುವುದಾಗಿ ಹೇಳಿದ್ದ ಆರೋಪಿ ಪ್ರದೀಪ್, ಬೈಕ್ ಅನ್ನು ಟ್ರಯಲ್ ಮಾಡುವುದಾಗಿ ಹೇಳಿದ್ದ. ಇದನ್ನು ನಂಬಿದ್ದ ಅಶೋಕ್ ಅವರನ್ನು ಬೈಕ್ ಅನ್ನು ನೀಡಿದ್ದರು. ಆದರೆ, ಬೈಕ್ ತೆಗೆದುಕೊಂಡು ಹೋದ ಪ್ರದೀಪ್ ವಾಪಸ್ ಬಂದಿರಲೇ ಇಲ್ಲ. ಈ ಬಗ್ಗೆ ಜುಲೈ 15ರಂದು ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ADVERTISEMENT

ಈ ಪ್ರಕರಣದ ತನಿಖೆಗಾಗಿ ಡಿವೈಎಸ್‌ಪಿ ಎಸ್. ಪಾಂಡುರಂಗ ಮಾರ್ಗದರ್ಶನದಲ್ಲಿ ಪಿಎಸ್ಐ ಬಿ.ವಿ. ಕಿರಣ್ ಕುಮಾರ್ ಮತ್ತು ತಂಡದವರು ಕಾರ್ಯಾಚರಣೆ ಕೈಗೊಂಡಿದ್ದರು. ಕಡೂರು ತಾಲ್ಲೂಕಿನ ಪ್ರದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ತುಮಕೂರು ಜಿಲ್ಲೆಯ ಶಿರಾ ಮತ್ತು ಕುಣಿಗಲ್, ಮೈಸೂರು, ಚನ್ನರಾಯಪಟ್ಟಣ ಮತ್ತು ಶಿಡ್ಲಘಟ್ಟದಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಪ್ರಭಾರ ಪಿಎಸ್ಐ ಬಿ.ವಿ.ಕಿರಣ್ ಕುಮಾರ್, ಸಿಬ್ಬಂದಿ ಮಂಜುನಾಥ್ ರೆಡ್ಡಿ, ರಾಮಕೃಷ್ಣಾರೆಡ್ಡಿ, ಮುನಾವರ್‌ಪಾಷ, ಲಕ್ಷ್ಮಣ್ ತೇಲಿ, ಮಂಜುನಾಥ್. ಸಿ, ಅಮರೇಶ್.ವಿ ಇದ್ದರು. 

ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡ ಐದು ದ್ವಿಚಕ್ರ ವಾಹನಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.