
ಕೋಲಾರ: ತಾಲ್ಲೂಕಿನ ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಲ್ಲಿ ಆಡಳಿತ ಮಂಡಳಿಗೆ ಸಾಮಾನ್ಯ ಚುನಾವಣೆ ಸಂಬಂಧಿಸಿದಂತೆ ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗಿದೆ ಎಂಬ ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸೊಸೈಟಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಎಪಿಎಂಸಿ ಮಾಜಿ ಅಧ್ಯಕ್ಷೆ ಜೆಡಿಎಸ್‌ನ ಕುರ್ಕಿ ರಾಜೇಶ್ವರಿ ನೇತೃತ್ವದಲ್ಲಿ ಸೋಮವಾರ ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಮತದಾರರ ಪಟ್ಟಿ ತಯಾರಿಕೆ ನಿಯಮ 13ಡಿ ಮತ್ತು ಪ್ರಕರಣ 20ರ ರೀತ್ಯ ಅನುಸರಿಸಿರುವ ಕ್ರಮಗಳ ಬಗ್ಗೆ ದೃಢೀಕರಣ ದಾಖಲೆಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ದೂರಿದರು.
ಕುರ್ಕಿ ರಾಜೇಶ್ವರಿ ಮಾತನಾಡಿ, ‘ಈ ಸೊಸೈಟಿಯ ಆಡಳಿತ ಮಂಡಳಿಗೆ ಜ.20 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜ.28 ರಂದು ಚುನಾವಣೆ ನಡೆಯಲಿದೆ. ಆದರೆ, ಸೊಸೈಟಿಯ ಅಧ್ಯಕ್ಷರು ಹಾಗೂ ಸೊಸೈಟಿಯ ಸಿಇಓ ಶಾಮೀಲಾಗಿ 200ಕ್ಕೂ ಹೆಚ್ಚು ಮಂದಿ ಕೈ ಸಾಲಗಾರರನ್ನು ಅಕ್ರಮವಾಗಿ ಮತಪಟ್ಟಿಗೆ ಸೇರ್ಪಡೆ ಮಾಡಿ ವೋಟ್ ಚೋರಿ ಮಾಡಿದ್ದಾರೆ’ ಎಂದು ಆರೋಪಿಸಿದರು.
ವರ್ತೂರು ಪ್ರಕಾಶ್ ಮಾತನಾಡಿ, ‘ಸಹಕಾರ ಸಂಘಗಳ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಅಕ್ರಮ ಮತದಾರರ ಪಟ್ಟಿಯನ್ನು ತಕ್ಷಣವೇ ರದ್ದುಪಡಿಸಬೇಕು. ಸೋಲುವ ಭೀತಿಯಿಂದ ಈ ಅಕ್ರಮ ಎಸಗಲಾಗಿದೆ, ಅಡ್ಡದಾರಿಯಲ್ಲಿ ಅಧಿಕಾರಿ ಹಿಡಿಯುವ ಇವರ ಪ್ರಯತ್ನ ಫಲಿಸದು’ ಎಂದು ಎಚ್ಚರಿಸಿದರು.
ಅಕ್ರಮದ ಕುರಿತು ಸಹಕಾರ ಸಂಘಗಳ ಉಪನಿಬಂಧಕರು ಮಧ್ಯೆ ಪ್ರವೇಶಿಸಿ ತನಿಖೆ ನಡೆಸಬೇಕು, ಅಕ್ರಮ ಮತದಾರರ ಪಟ್ಟಿ ರದ್ದುಗೊಳಿಸಬೇಕು, ಅಧಿಕಾರಿಗಳು ನ್ಯಾಯಯುತ ತನಿಖೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಅಕ್ರಮ ಮತದಾರರ ಪಟ್ಟಿ ತಯಾರಿಸುವ ಮೂಲಕ ನರಸಾಪುರ ಸೊಸೈಟಿಯನ್ನು ಹಾಳು ಮಾಡುವ ಹುನ್ನಾರ ನಡೆದಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್, ಬಾಬುಮೌನಿ, ಬಣಕನಹಳ್ಳಿ ನಟರಾಜ್, ಸಿ.ಡಿ.ರಾಮಚಂದ್ರಗೌಡ, ಅಂಜಿನಪ್ಪ, ಜನಪನಹಳ್ಳಿ ಆನಂದ್, ಚಿಕ್ಕಹಸಾಳ ಮಂಜುನಾಥ್, ನರಸಾಪುರ ವಿಜಯಕುಮಾರ್, ಕೆಂದಟ್ಟಿ ಚಂದ್ರು, ಕೆಂಬೋಡಿ ನಾರಾಯಣಸ್ವಾಮಿ ಹಾಗೂ ಎರಡೂ ಪಕ್ಷಗಳ ಕಾರ್ಯಕರ್ತರು ಇದ್ದರು.
ಕಚೇರಿಗೆ ಹೋದರೆ ಡಿ.ಆರ್ ನಾಪತ್ತೆ
ಅಕ್ರಮದ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕ (ಡಿ.ಆರ್) ಆಗಲಿ ಎ.ಡಿ.ಆರ್ ಆಗಲಿ ಸಮರ್ಪಕ ಉತ್ತರ ನೀಡದೆ ಭೇಟಿಯಾಗಲು ಹೋದರೆ ಪಾಲಾಯನ ಮಾಡುತ್ತಿರುವುದೇಕೆ ಎಂದು ಕುರ್ಕಿ ರಾಜೇಶ್ವರಿ ಪ್ರಶ್ನಿಸಿದರು. ಪ್ರಕರಣ ಸಂಬಂಧ ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ ಎಡಿಆರ್ ಹಾಗೂ ಸಂಘದ ಸಿಇಓ ಸೇರಿದಂತೆ ಮೂವರು ಕಚೇರಿಯಲ್ಲಿ ಇರುವುದಾಗಿ ಡಿ.ಆರ್ ಹೇಳಿದರು. ಕಚೇರಿಗೆ ಬನ್ನಿ ಮಾತನಾಡೋಣ ಎಂದರು. ಅದರಂತೆ ಮತಪಟ್ಟಿಯ ಕುರಿತು ಸ್ಪಷ್ಟನೆ ಪಡೆಯಲು ಡಿ.ಆರ್ ಕಚೇರಿಗೆ ಹೋದಾಗ ಎಲ್ಲರೂ ನಾಪತ್ತೆಯಾಗಿದ್ದರು. ಅರ್ಜಿ ನೀಡಿದರೆ ಅದನ್ನು ಡಿ.ಆರ್ ಮತ್ತು ಎ.ಡಿ.ಆರ್‌ಗೆ ನೀಡುವುದಾಗಿ ಕಚೇರಿ ಸಿಬ್ಬಂದಿ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಹಳ ದಿನಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಕುರ್ಕಿ ರಾಜೇಶ್ವರಿ ಆ ಪಕ್ಷದ ಶಾಲು ಹೊದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಆಡಳಿತ ಪಕ್ಷದಿಂದ ಸಹಕಾರಿ ವ್ಯವಸ್ಥೆ ಅಧಃಪತನ ಜಿಲ್ಲೆಯಲ್ಲಿ ಈಗಾಗಲೇ ಸಹಕಾರಿ ವ್ಯವಸ್ಥೆಯನ್ನು ನಾಶಪಡಿಸಲಾಗಿದೆ ಡಿಸಿಸಿ ಬ್ಯಾಂಕ್ ನಂಬಿದ್ದ ಮಹಿಳೆಯರು ರೈತರಿಗೆ ಶೂನ್ಯಬಡ್ಡಿ ಸಾಲ ಸೌಲಭ್ಯ ಗಗನಕುಸುಮವಾಗಿದೆ. ಸ್ಥಳೀಯ ಆಡಳಿತದ ಹೊಣೆ ಹೊತ್ತಿರುವ ಆಡಳಿತ ಪಕ್ಷದ ಜನಪ್ರತಿನಿಧಿಗಳ ಧೋರಣೆಯಿಂದಾಗಿ ಜಿಲ್ಲೆಯ ಸಹಕಾರಿ ವ್ಯವಸ್ಥೆ ಅಧಃಪತನದತ್ತ ಸಾಗಿದೆ ಎಂದು ವರ್ತೂರು ಪ್ರಕಾಶ್ ಕಿಡಿಕಾರಿದರು. ಜಿಲ್ಲೆಯ ಸಹಕಾರಿ ರಂಗದಿಂದ ಸಾಲ ಸೌಲಭ್ಯ ಸಿಗದ ಕಾರಣ ಜಿಲ್ಲೆಯಲ್ಲಿ ಮತ್ತೆ ಮೀಟರ್ ಬಡ್ಡಿ ದಂಧೆ ತಲೆ ಎತ್ತಿದೆ. ಹೊರರಾಜ್ಯಗಳವರು ಬಂದು ದಂಧೆ ನಡೆಸುವಂತಾಗಿದ್ದು ರೈತರುಮಹಿಳೆಯರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.