ಕೋಲಾರ: ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ವಾಪಸ್ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಮಾಜಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಬಜೆಟ್‍ನಲ್ಲಿ ಮೀಸಲಿಟ್ಟಿರುವ ಪರಿಶಿಷ್ಟರ ಅನುದಾನವನ್ನು ಪರಿಶಿಷ್ಟರ ಯೋಜನೆಗಳಿಗೆ ಮಾತ್ರ ಬಳಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು.
ಮುನಿಸ್ವಾಮಿ ಮಾತನಾಡಿ, ‘ಎರಡು ವರ್ಷಗಳಿಂದ ಸುಮಾರು ₹ 50 ಸಾವಿರ ಕೋಟಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಹಣವನ್ನು ರಾಜ್ಯ ಸರ್ಕಾರ ನಕಲಿ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದು, ಕೂಡಲೇ ವಾಪಸ್ ನೀಡಲೇಬೇಕು. ದಲಿತರ ಹಣ ನುಂಗಿ ನೀರು ಕುಡಿಯುತ್ತಿದ್ದರೂ ಜಿಲ್ಲೆಯ ದಲಿತ ನಾಯಕರು ಧ್ವನಿ ಎತ್ತದಿರುವುದು ಬೇಸರದ ಸಂಗತಿಯಾಗಿದ್ದು, ನಮ್ಮ ಹೋರಾಟಕ್ಕೆ ಕೈಜೋಡಿಸುವ ಮುಖಾಂತರ ಅನುದಾನ ಪಡೆದುಕೊಳ್ಳಲು ಮುಂದಾಗಬೇಕು’ ಎಂದರು.
‘ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಸಮುದಾಯದವರ ಮತ ಪಡೆದ ಸಿದ್ದರಾಮಯ್ಯ ಒಂದು ಸಮುದಾಯ ಓಲೈಕೆಗೆ ಮುಂದಾಗಿದ್ದಾರೆ. ಅಹಿಂದ ನಾಯಕರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಇದೀಗ ಸಚಿವ ಜಮೀರ್ ಅಹಮದ್ ಮತ್ತು ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತು ಕೇಳಿಕೊಂಡು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ರಾಜ್ಯದ ಜನರು ನೋಡುತ್ತಿದೆ, ಮುಂದೆ ತಕ್ಕಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.
‘ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದ್ದರೂ ಅದೇ ಸಮುದಾಯದ ಸಚಿವವರು ಮೌನವಾಗಿದ್ದಾರೆ’ ಎಂದು ಟೀಕಿಸಿದರು.
ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ‘ಜನಪರ ಕಲ್ಯಾಣ ಕಾರ್ಯಕ್ರಮಗಳ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರವು ದಲಿತ, ಹಿಂದುಳಿದ ಜಾತಿಗಳಿಗೆ ದ್ರೋಹ ಬಗೆದಿದೆ. 8 ನಿಗಮಗಳಲ್ಲಿ ಸಾಧನೆ ಶೂನ್ಯವಾಗಿದೆ. ವಾಲ್ಮೀಕಿ ನಿಗಮದಂತೆ ಎಲ್ಲಾ ನಿಗಮಗಳಲ್ಲಿ ಹಗರಣ ನಡೆದಿರುವ ಅನುಮಾನವಿದ್ದು ಕೂಡಲೇ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಒಂದು ಜನಾಂಗಕ್ಕೆ ಮೀಸಲಿಟ್ಟಿರುವ ಹಣವನ್ನು ಅದೇ ಜನಾಂಗಕ್ಕೆ ನೀಡಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಅನೇಕ ಬಾರಿ ಜನರ ಮುಂದೆ ವಿಚಾರ ಇಟ್ಟಿದ್ದೇವೆ. ಆದರೂ ಸರಕಾರಕ್ಕೆ ಕಾಳಜಿಯಿಲ್ಲ. ಕೇವಲ 8 ದಿನಗಳ ಮಟ್ಟಿಗೆ ಅಧಿವೇಶನ ಕರೆದಿರುವುದು ರಾಜ್ಯದ ಅಭಿವೃದ್ಧಿಗೆ ಅಲ್ಲ; ಕಾಂಗ್ರೆಸ್ ಅಭಿವೃದ್ಧಿಗೆ. ಹೀಗಾಗಿ, ಈ ಸರ್ಕಾರ ಅಧಿಕಾರದಿಂದ ತೊಲಗಿಸಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಪರಿಶಿಷ್ಟರ ಅನುದಾನ ಬೇರೆ ಉದ್ದೇಶಕ್ಕೆ ಬಳಸಿರುವ ಈ ಸರ್ಕಾರಕ್ಕೆ ಅಹಿಂದ ಪರ ಎಂದು ಹೇಳಲು ನೈತಿಕತೆ ಇಲ್ಲ. ಹೋರಾಟ ಮಾಡಿದರೂ ಕುರುಡ, ಕಿವುಡರಂತೆ ನಡೆದುಕೊಳ್ಳುತ್ತಿದ್ದು, ಕೂಡಲೇ ದಲಿತರ ಹಣ ಬೇರೆ ಕಾರ್ಯಕ್ಕೆ ಬಳಸದೆ ಅವರ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ.ಮಹೇಶ್, ರಾಜು, ಮುಖಂಡರಾದ ಕಪಾಲಿ ಶಂಕರ್, ಸಾಮಾ ಬಾಬು, ನಾಮಾಲ್ ಮಂಜು, ತಿಮ್ಮರಾಯಪ್ಪ, ಅರುಣಮ್ಮ, ಮಮತಮ್ಮ ಹಾಗೂ ಕಾರ್ಯಕರ್ತರು ಇದ್ದರು.
ಪರಿಶಿಷ್ಟರ ಅನುದಾನ ವಾಪಸ್ ಮಾಡಬೇಕೆಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ 8 ನಿಗಮಗಳ ಕಚೇರಿಗೂ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ
ಎಸ್.ಮುನಿಸ್ವಾಮಿ ಮಾಜಿ ಸಂಸದ
ನೂರಾರು ಹಗರಣ ಮಾಡಿರುವ ಈ ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಇರಲು ನೈತಿಕತೆಯಿಲ್ಲ. ರಾಜ್ಯದ ಜನರ ರಕ್ಷಣೆಗೆ ಬಿಜೆಪಿ ಸಿದ್ಧವಿದ್ದು ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ
ವೈ.ಸಂಪಂಗಿ ಮಾಜಿ ಶಾಸಕ
ದೌರ್ಜನ್ಯ ಪ್ರಕರಣ ದಾಖಲಿಸಬೇಕು
‘ಪರಿಶಿಷ್ಟರಿಗೆ ಮೀಸಲಿಟ್ಟಿರುವ ಅನುದಾನವನ್ನು ಅವರ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಆದರೆ ಕಳೆದ ಸಾಲಿನಲ್ಲಿ ₹ 39 ಸಾವಿರ ಕೋಟಿಯನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿದರು. ಈ ಸಾಲಿನಲ್ಲೂ ₹ 13 ಸಾವಿರ ಕೋಟಿ ಬಳಸಿಕೊಂಡಿದ್ದಾರೆ. ಆ ರೀತಿ ಆಗಬಾರದು. ಹಣ ದುರ್ಬಳಕೆ ಶೋಷಿತರಿಗೆ ಮಾಡುತ್ತಿರುವ ದ್ರೋಹ. ಹೀಗಾಗಿ ಸರ್ಕಾರದ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಬೇಕು’ ಎಂದು ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.
ಆತ್ಮಹತ್ಯೆ ಪ್ರಕರಣ–ಕಾಂಗ್ರೆಸ್ ರಾಜಕಾರಣ
‘ಸರ್ಕಾರದ ಪ್ರತಿ ಸಚಿವರ ಮೇಲೆಯೂ ನಾನಾ ಪ್ರಕರಣಗಳಿವೆ. ಆದರೆ ಚಿಕ್ಕಬಳ್ಳಾಪುರದಲ್ಲಿ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ದುರ್ಬಳಸಿಕೊಂಡು ನಮ್ಮ ಸಂಸದರ ಮೇಲೆ ವಿನಾಕಾರಣ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಿಯಾಂಕ್ ಖರ್ಗೆ ನಾಗೇಂದ್ರ ಕೊಡಗಿನ ಶಾಸಕರು ಸೇರಿದಂತೆ ಅನೇಕರ ಮೇಲೆ ಪತ್ರ ಬರೆದು ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಮೇಲೂ ತನಿಖೆ ನಡೆಸಬೇಕು’ ಎಂದು ಮುನಿಸ್ವಾಮಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.