ADVERTISEMENT

ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಧರಣಿ

ರಫೇಲ್‌ ಆರೋಪ: ಕ್ಷಮೆ ಯಾಚನೆಗೆ ಕಾರ್ಯಕರ್ತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 15:48 IST
Last Updated 16 ನವೆಂಬರ್ 2019, 15:48 IST
ಪ್ರಧಾನಿ ಮೋದಿ ವಿರುದ್ಧ ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ಆರೋಪ ಮಾಡಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕೋಲಾರದಲ್ಲಿ ಶನಿವಾರ ಧರಣಿ ನಡೆಸಿದರು.
ಪ್ರಧಾನಿ ಮೋದಿ ವಿರುದ್ಧ ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ಆರೋಪ ಮಾಡಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕೋಲಾರದಲ್ಲಿ ಶನಿವಾರ ಧರಣಿ ನಡೆಸಿದರು.   

ಕೋಲಾರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ಆರೋಪ ಮಾಡಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಶನಿವಾರ ಧರಣಿ ನಡೆಸಿದರು.

‘ಮೋದಿ ರಫೇಲ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ರಾಹುಲ್‌ ಗಾಂಧಿ ಸುಳ್ಳು ಆರೋಪ ಮಾಡಿದ್ದರು. ಅಲ್ಲದೇ, ಹಗರಣ ಸಂಬಂಧ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಕಾಂಗ್ರೆಸ್‌ ರಾಜಕೀಯ ಲಾಭಕ್ಕೆ ಮೋದಿ ಅವರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಸಂಚು ಮಾಡಿತ್ತು’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ರಾಹುಲ್‌ ಗಾಂಧಿ ಸುಳ್ಳು ಆರೋಪ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸಿದ್ದರು. ರಾಜಕೀಯ ದುರುದ್ದೇಶಕ್ಕೆ ದೇಶದ ರಕ್ಷಣಾ ವ್ಯವಸ್ಥೆ ಅವಮಾನಿಸಿದ್ದ ಅವರಿಗೆ ಸುಪ್ರೀಂ ಕೋರ್ಟ್‌ನ ಆದೇಶದಿಂದ ತೀವ್ರ ಮುಖಭಂಗವಾಗಿದೆ. ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ನ್ಯಾಯ ಎತ್ತಿ ಹಿಡಿದಿದೆ’ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ADVERTISEMENT

‘ರಾಹುಲ್‌ ಗಾಂಧಿ ಸುಪ್ರೀಂ ಕೋರ್ಟ್‌ ಆದೇಶವನ್ನು ತಿರುಚಿ ಮೋದಿ ವಿರುದ್ಧ ಅಪಪ್ರಚಾರ ನಡೆಸಿದ್ದರು. ಸುಳ್ಳು ಮಾಹಿತಿ ಹಬ್ಬಿಸಿ ಕೇಂದ್ರದ ವಿರುದ್ಧ ದೇಶದ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದರು. ದೇಶದ ಆಂತರಿಕ ಭದ್ರತೆ, ರಕ್ಷಣೆ ವಿಚಾರದಲ್ಲೂ ರಾಜಕೀಯ ಮಾಡಿದ್ದು ನಾಚಿಕೆಗೇಡು’ ಎಂದು ವಾಗ್ದಾಳಿ ನಡೆಸಿದರು.

ಹೋರಾಟ ನಡೆಸುತ್ತೇವೆ: ‘ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನ ಖರೀದಿಸಲು ಮುಂದಾಗಿದೆ. ರಾಹುಲ್‌ ಗಾಂಧಿ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಸಹಕರಿಸಲಿ. ಇಲ್ಲದಿದ್ದರೆ ದೇಶದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಮಮತಾ, ನಗರ ಘಟಕದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಶಿವಕುಮಾರ್, ಪದಾಧಿಕಾರಿಗಳಾದ ವಿಜಯ್‌ಕುಮಾರ್, ಗೋವಿಂದರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.