ADVERTISEMENT

ಬಿಹಾರ ಗೆಲುವು–ಬಿಜೆಪಿ ವಿಜಯೋತ್ಸವ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರೂ ಸ್ಥಾನದಲ್ಲಿ ಗೆಲುವು: ಬಿಜೆಪಿ ಮುಖಂಡರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:58 IST
Last Updated 15 ನವೆಂಬರ್ 2025, 6:58 IST
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿರುವುದಕ್ಕೆ ಕೋಲಾರದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು, ಕಾರ್ಯಕರ್ತರು ಓಂಶಕ್ತಿ ಚಲಪತಿ ಹಾಗೂ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿರುವುದಕ್ಕೆ ಕೋಲಾರದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು, ಕಾರ್ಯಕರ್ತರು ಓಂಶಕ್ತಿ ಚಲಪತಿ ಹಾಗೂ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು   

ಕೋಲಾರ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾರಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ನಗರದ ಡೂಂಲೈಟ್‌ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರ ಕಟೌಟ್‌ ಹಿಡಿದು ಜೈಕಾರ ಹಾಕಿದರು. ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಕ್ಷದ ಹಿರಿಯ ಮುಖಂಡರ ಹೆಸರು ಕೂಗಿ ಹರ್ಷ ವ್ಯಕ್ತಪಡಿಸಿದರು.

ಓಂಶಕ್ತಿ ಚಲಪತಿ ಮಾತನಾಡಿ, ‘ಬಿಹಾರದಲ್ಲಿ ಅಭೂತಪೂರ್ವ ಗೆಲುವು ಲಭಿಸಿರುವುದು ಬಿಜೆಪಿ ಹಾಗೂ ಎನ್‌ಡಿಎ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕೋಲಾರದಲ್ಲಿ ಕೂಡ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಹಾರದಲ್ಲಿ ಬಿಜೆಪಿ ಗೆಲ್ಲಿಸಿದ ಎಲ್ಲಾ ಮತದಾರರಿಗೆ ಅಭಿನಂದನೆಗಳು’ ಎಂದರು.

ADVERTISEMENT

ಕಾಂಗ್ರೆಸ್‌ಗೆ ಮತ್ತೊಮ್ಮೆ ಸ್ಪಷ್ಟ ಉತ್ತರ ನೀಡಿದ್ದೇವೆ. ವಿರೋಧ ಪಕ್ಷಗಳು ಅಭಿವೃದ್ಧಿ ವಿಚಾರ ಮಾತನಾಡದೆ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದವು. ಈಗ ದೂಳಿಪಟವಾಗಿವೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಅಭಿವೃದ್ಧಿ ಕೆಲಸಗಳಿಗೆ ಜನ ಎನ್‌ಡಿಎ ಕೈ ಹಿಡಿದಿದ್ದಾರೆ. ರಾಹುಲ್‌ ಗಾಂಧಿ ವೋಟ್‌ ಚೋರಿ ಎಂದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿದರು. ಈಗ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ವೋಟ್‌ ಚೋರಿ ಪಿತಾಮಹರು ಕಾಂಗ್ರೆಸ್‌ನವರು’ ಎಂದು ಟೀಕಾ ಪ್ರಹಾರ ನಡೆಸಿದರು.

ಬಿಹಾರದಲ್ಲಿ ಯಾರೂ ಊಹಿಸದ ಗೆಲುವು ಲಭಿಸಿದೆ. ರಾಹುಲ್‌ ಗಾಂಧಿ ಅವರನ್ನು ಕರೆದುಕೊಂಡು ಹೋದರೆ ಯಾರೂ ಕಾಂಗ್ರೆಸ್‌ಗೆ ಮತ ಹಾಕಲ್ಲ. ಹೊರ ದೇಶಗಳಿಗೆ ಹೋಗಿ ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಜನರಿಗೆ ಗೊತ್ತಾಗಿ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.

ಮುಂದೆ ರಾಜ್ಯ ಕೂಡ ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗಲಿದೆ. ಈಗಲೇ ಚುನಾವಣೆ ನಡೆದರೂ ಬಿಜೆಪಿ ಮೈತ್ರಿಕೂಟ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಈಗಾಗಲೇ ಆಡಳಿತ ವಿರೋಧಿ ಅಲೆ ಶುರುವಾಗಿದೆ ಎಂದು ಹೇಳಿದರು.

ವಿಜಯೋತ್ಸವದಲ್ಲಿ ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ವಿಜಯಕುಮಾರ್‌, ಮಮತಮ್ಮ, ಕೆಂಬೋಡಿ ನಾರಾಯಣಸ್ವಾಮಿ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.