ADVERTISEMENT

ಕೃಷಿ ಸಚಿವ ಬಿ.ಸಿ.ಪಾಟೀಲಗೆ ಕಪ್ಪು ಬಾವುಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 12:43 IST
Last Updated 6 ಜನವರಿ 2021, 12:43 IST
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನಲ್ಲಿ ಬುಧವಾರ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ವೇಳೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಬರುತ್ತಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿದರು.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನಲ್ಲಿ ಬುಧವಾರ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ವೇಳೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಬರುತ್ತಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿದರು.   

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಬುಧವಾರ ನಡೆದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌, ಸಂಸದ ಎಸ್‌.ಮುನಿಸ್ವಾಮಿ ಹಾಗೂ ಅಧಿಕಾರಿಗಳ ಜತೆ ಮುಳಬಾಗಿಲು ತಾಲ್ಲೂಕಿನ ಎನ್‌.ವಡ್ಡಹಳ್ಳಿಯಿಂದ ಎಪಿಎಂಸಿವರೆಗೆ ಎತ್ತಿನ ಗಾಡಿಗಳಲ್ಲಿ ಮೆರವಣಿಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿದರು.

‘ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಾಗಿದೆ. ಸರ್ಕಾರಗಳು ಕೃಷಿ ವಿರೋಧಿ ನೀತಿ ಅನುಸರಿಸುತ್ತಿವೆ’ ಎಂದು ಸಂಘಟನೆ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಲು ಯತ್ನಿಸಿದರು. ಆಗ ಪೊಲೀಸರು ಸಂಘಟನೆ ಸದಸ್ಯರನ್ನು ವಶಕ್ಕೆ ತೆಗೆದುಕೊಂಡು ಸಂಜೆ ಬಿಡುಗಡೆಗೊಳಿಸಿದರು.

ADVERTISEMENT

ಸಂಪುಟ ವಿಸ್ತರಣೆ: ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ, ‘ಸಚಿವ ಸಂಪುಟ ವಿಸ್ತರಣೆಯು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗುತ್ತದೆ. ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ’ ಎಂದರು.

‘ಮುಖ್ಯಮಂತ್ರಿಗಳು ವಿಭಾಗಾವಾರು ಸಭೆ ನಡೆಸಿ ಎಲ್ಲಾ ಶಾಸಕರ ಸಮಸ್ಯೆ ಆಲಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಮುಖ್ಯಮಂತ್ರಿಗಳ ಬಳಿ ಶಾಸಕರು ಸಮಸ್ಯೆ ಹೇಳಿಕೊಂಡರೆ ಅಥವಾ ತಮ್ಮ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಎಂದರೆ ಅದು ಅಸಮಾಧಾನವಲ್ಲ. ಅನುದಾನ ಕೇಳುವುದು ಶಾಸಕರ ಹಕ್ಕು. ಶಾಸಕರು ಮುಖ್ಯಮಂತ್ರಿಗಳ ಬಳಿ ಸಮಸ್ಯೆ ಹೇಳಿಕೊಳ್ಳದೆ ಯಾರ ಬಳಿ ಹೇಳಬೇಕು?’ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ಅವರಿಗೆ ಬಿಜೆಪಿ ಮೇಲೆ ಪ್ರೀತಿ ಇರುವುದರಿಂದ ಮೃದು ಧೋರಣೆ ತಳೆದಿದ್ದಾರೆ. ಅವರು ನಮ್ಮನ್ನು ಪ್ರೀತಿಯಿಂದ ಕಂಡರೆ ಏಕೆ ಬೇಡ ಎನ್ನಲಿ. ಬಿಜೆಪಿಗೆ 119 ಶಾಸಕರ ಸಂಖ್ಯಾ ಬಲವಿದೆ. ಹೀಗಾಗಿ ಜೆಡಿಎಸ್‌ ಜತೆ ಹೊಂದಾಣಿಕೆಯ ಅಗತ್ಯವಿಲ್ಲ. ನಮ್ಮ ಮನೆಗೆ ಬರುವವರಿಗೆ ಬೇಡ ಎನ್ನಲು ಆಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.