ADVERTISEMENT

ಬೋಡಿ ಬಂಡೆ ಬೆಟ್ಟಕ್ಕೆ ಜೀವ ವೈವಿಧ್ಯ ತಾಣ ಮಾನ್ಯತೆ

ಎಲೆ ಮೂತಿ ಬಾವಲಿ ಸಂತತಿ ಸಂರಕ್ಷಣೆ ಉದ್ದೇಶ: ಪ್ರಸ್ತಾವಕ್ಕೆ ಸರ್ಕಾರದ ಒಪ್ಪಿಗೆ

ಜೆ.ಆರ್.ಗಿರೀಶ್
Published 9 ಫೆಬ್ರುವರಿ 2019, 15:09 IST
Last Updated 9 ಫೆಬ್ರುವರಿ 2019, 15:09 IST
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಬೋಡಿ ಬಂಡೆ ಬೆಟ್ಟದ ಗುಹೆಗಳಲ್ಲಿ ಪತ್ತೆಯಾಗಿರುವ ಎಲೆ ಮೂತಿ ಬಾವಲಿ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಬೋಡಿ ಬಂಡೆ ಬೆಟ್ಟದ ಗುಹೆಗಳಲ್ಲಿ ಪತ್ತೆಯಾಗಿರುವ ಎಲೆ ಮೂತಿ ಬಾವಲಿ.   

ಕೋಲಾರ: ಜಗತ್ತಿನಲ್ಲೇ ಅಪರೂಪದ ಸಸ್ತನಿಗಳೆಂದು ಗುರುತಿಸಲಾಗಿರುವ ಎಲೆ ಮೂತಿ ಬಾವಲಿಗಳ ಸಂರಕ್ಷಣೆ ದೃಷ್ಟಿಯಿಂದ ರಾಜ್ಯ ಸರ್ಕಾರವು ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಬೋಡಿ ಬಂಡೆ ಬೆಟ್ಟವನ್ನು ಜೀವ ವೈವಿಧ್ಯ ಪರಂಪರೆ ತಾಣವಾಗಿ ಘೋಷಿಸಿದೆ.

ದುಗ್ಗಸಂದ್ರ ಹೋಬಳಿ ವ್ಯಾಪ್ತಿಯ ಬೋಡಿ ಬಂಡೆ ಬೆಟ್ಟದ ಗುಹೆಗಳಲ್ಲಿ ಎಲೆ ಮೂತಿ ಬಾವಲಿಗಳು ವಾಸಿಸುತ್ತಿವೆ. ಈ ಬಾವಲಿ ಸಂತತಿಯು ಅಳಿವಿನ ಅಂಚಿನಲ್ಲಿದ್ದು, ಇವುಗಳನ್ನು ಸಂರಕ್ಷಿಸಬೇಕೆಂಬ ಕೂಗು ಬಲವಾಗಿತ್ತು. ಪರಿಸರವಾದಿಗಳು, ವನ್ಯಜೀವಿ ತಜ್ಞರು, ಪ್ರಾಣಿ– ಪಕ್ಷಿ ಪ್ರಿಯರು ಅರಣ್ಯ ಇಲಾಖೆಗೆ ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರು.

ಹನುಮನಹಳ್ಳಿ ಗ್ರಾಮದ ಸರ್ವೆ ನಂಬರ್‌ 103ರಲ್ಲಿರುವ ಬೋಡಿ ಬಂಡೆ ಬೆಟ್ಟವು 92.34 ಎಕರೆ ವಿಸ್ತಾರವಾಗಿದೆ. ಈ ಬೆಟ್ಟದ ಗುಹೆಗಳಲ್ಲಿ ಸುಮಾರು 300 ಎಲೆ ಮೂತಿ ಬಾವಲಿಗಳಿವೆ. ಆದರೆ, ಬೆಟ್ಟದ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರಿಂದ ಎಲೆ ಮೂತಿ ಬಾವಲಿ ಸಂತತಿಗೆ ಅಪಾಯ ಎದುರಾಗಿತ್ತು.

ADVERTISEMENT

ಕಲ್ಲು ಗಣಿಗಾರಿಕೆಯಲ್ಲಿ ಬಂಡೆ ಸಿಡಿಸಲು ಬಳಸುವ ಜಿಲೆಟಿನ್‌ನಂತಹ ಸ್ಫೋಟಕ ವಸ್ತುಗಳ ಶಬ್ಧಕ್ಕೆ ಹೆದರಿ ಬಾವಲಿಗಳು ಗುಹೆಗಳಿಂದ ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಗುಹೆಗಳಲ್ಲೇ ಉಳಿದ ಬಾವಲಿಗಳಿಗೆ ಆಹಾರ ಮತ್ತು ನೀರಿನ ಸಮಸ್ಯೆ ಎದುರಾಗಿ ಹಲವು ಮೃತಪಟ್ಟಿದ್ದವು.

1994ರಲ್ಲಿ ಪತ್ತೆ: ಜರ್ಮನಿಯ ವಿಜ್ಞಾನಿಗಳು ಹಾಗೂ ಭಾರತೀಯ ವೈರಾಣು ಸಂಸ್ಥೆ (ಐವಿಐ) ತಜ್ಞರು 1994ರಲ್ಲಿ ಬೋಡಿ ಬಂಡೆ ಬೆಟ್ಟಕ್ಕೆ ಭೇಟಿ ನೀಡಿ ಎಲೆ ಮೂತಿ ಬಾವಲಿಗಳನ್ನು ಮೊದಲ ಬಾರಿಗೆ ಪತ್ತೆ ಮಾಡಿದ್ದರು. ಜತೆಗೆ ಇದೇ ಸಂತತಿಗೆ ಸೇರಿದ ದುರ್ಗದಾಸಿ ಎಲೆ ಮೂತಿ ಬಾವಲಿಗಳನ್ನು ಗುಹೆಗಳಲ್ಲಿ ಪತ್ತೆ ಹಚ್ಚಿದ್ದರು.

ತೀರಾ ವಿರಳ ಸಸ್ತನಿಗಳಾದ ಎಲೆ ಮೂತಿ ಬಾವಲಿಗಳು ಬೋಡಿ ಬಂಡೆ ಬೆಟ್ಟದಲ್ಲಿ ಮಾತ್ರ ಕಾಣಸಿಗುತ್ತವೆ. ದುರ್ಗದಾಸಿ ಎಲೆ ಮೂತಿ ಬಾವಲಿಗಳು ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯನ್ನು ಹೊರತುಪಡಿಸಿದರೆ ಈ ಬೆಟ್ಟದಲ್ಲಿ ಮಾತ್ರ ಇವೆ.

ಪ್ರಸ್ತಾವ ಸಲ್ಲಿಕೆ: ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ತಜ್ಞರು ಮತ್ತು ತೆಲಂಗಾಣ ವನ್ಯಜೀವಿ ಮಂಡಳಿ ಸದಸ್ಯರ ತಂಡವು ನಾಲ್ಕೈದು ವರ್ಷಗಳ ಹಿಂದೆ ಈ ಬೆಟ್ಟಕ್ಕೆ ಬಂದು ಎಲೆ ಮೂತಿ ಬಾವಲಿಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಅರಣ್ಯ ಇಲಾಖೆಗೆ ಸಮಗ್ರ ವರದಿ ನೀಡಿತ್ತು.

ಈ ವರದಿ ಆಧರಿಸಿ ಹಾಗೂ ಪರಿಸರವಾದಿಗಳ ಒತ್ತಾಯಕ್ಕೆ ಮಣಿದು ಅರಣ್ಯ ಇಲಾಖೆ ಅಧಿಕಾರಿಗಳು ಬೋಡಿ ಬಂಡೆ ಬೆಟ್ಟವನ್ನು ಜೀವ ವೈವಿಧ್ಯ ಪರಂಪರೆ ತಾಣವಾಗಿ ಘೋಷಿಸುವಂತೆ ಜಿಲ್ಲಾಡಳಿತಕ್ಕೆ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ 2018ರಲ್ಲಿ ಪ್ರಸ್ತಾವ ಸಲ್ಲಿಸಿದ್ದರು. ಬಳಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ನೇತೃತ್ವದ ತಂಡವು ಬೆಟ್ಟಕ್ಕೆ ಭೇಟಿ ನೀಡಿತ್ತು.

ಇತ್ತೀಚೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಬೋಡಿ ಬಂಡೆ ಬೆಟ್ಟವನ್ನು ಜೀವ ವೈವಿಧ್ಯ ಪರಂಪರೆ ತಾಣವಾಗಿ ಘೋಷಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.